ನನ್ನದೊಂದು ಹೊಸ ನಾಡಗೀತೆ
( ವಿ.ಸೂ. ಬಿಟ್ಟು ಹೋದ ಜಾತಿಗಳನ್ನು ಸೇರಿಸಿಕೊಳ್ಳಬಹುದು )
ಜಯ ಕನ್ನಡ ಜಯ ಕನ್ನಡ
ಜಯ ಕನ್ನಡ ಮಾತೆ
ಜಯವಾಗಲಿ ಕರ್ನಾಟಕ
ರಾಜ್ಯಕೆ ಪ್ರಖ್ಯಾತೆ
ಜಯವಾಗಲಿ ನಮ್ಮ ಈ
ಜಾತ್ಯತೀತ ರಾಜ್ಯಕ್ಕೆ
ಶುಭವಾಗಲಿ ಸಕಲ ಜಾತಿ
ಧರ್ಮಗಳಿಗೆ ಜಯವಕ್ಕೆ
ಎಲ್ಲ ಜಾತಿ ಧರ್ಮಗಳಿಗೆ
ನೆಲೆಯಾಗಿಹ ನಾಡು
ಜಾತಿಯ ಆಧಾರದಲೇ
ಕಟ್ಟುತಿಹೆವು ಗೂಡು
ಕುರುಬ, ಬೇಡ, ಲಿಂಗಾಯತ
ವೀರಶೈವ ಬ್ರಾಹ್ಮಣ,
ಎಸ್.ಸಿ,ಎಸ್.ಟಿ, ದಲಿತರು
ಅಲ್ಪಸಂಖ್ಯಾತರು,
ಬೌದ್ಧ ಜೈನ, ಸೀಖ, ಫಾರ್ಸಿ
ಹಿಂದು ಧರ್ಮವೀರರು
ಎಲ್ಲ ಸೇರಿ ಜಾತ್ಯತೀತ
ರಾಜ್ಯ ಕಟ್ಟುತಿಹರು
ಜಾತಿ ಮತವ ಬಿಡಿರಿ ಎಂದ
ಮಹಾತ್ಮರ ಮರೆತಿಹರು
ಎಲ್ಲದಕ್ಕು ಜಾತಿ ತಂದು
ಮೆರೆವ ನಾಡ ಶೂರರು
ಜಯ ಕನ್ನಡ ಜಯ ಕನ್ನಡ
ಜಯ ಕನ್ನಡ ಮಾತೆ
ಇದು ನಮ್ಮಯ ಕನ್ನಡಿಗರ
ನೂತನ ನಾಡಗೀತೆ
– ಎಲ್. ಎಸ್. ಶಾಸ್ತ್ರಿ