Homeಸುದ್ದಿಗಳುಬೀಳಗಿ : ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾ ಮನವಿ ಪತ್ರ

ಬೀಳಗಿ : ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾ ಮನವಿ ಪತ್ರ

Published on

ಬೀಳಗಿ – ಕರ್ನಾಟಕದಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳನ್ನು ಜಾರಿಗೊಳಿಸಲು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸಮಪಾಲು-ಸಮಬಾಳು ಸಿಗುವಂತೆ ಮಾಡಲು ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೋರಾಟಗಾರ ಯಲ್ಲಪ್ಪ ಹೆಗಡೆ ಹೇಳಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಬೀಳಗಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಮನವಿ ಸಲ್ಲಿಸಿರುವ ಅವರು, ನಮ್ಮ ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿಕೊಳ್ಳಬೇಕು ಹಾಗೂ ಕೆಪಿಎಸ್‌ಸಿ, ಕೆಇಎ, ಕೆಎಸ್‌ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ಕ್ಯಾಲೆಂಡರ ಪ್ರಕಟಿಸಿ ಅದರ ಪ್ರಕಾರ ನಿಗದಿತ ವೇಳಾಪಟ್ಟಿಯಂತೆ ಅಕ್ರಮ ಹಾಗೂ ಭ್ರಷ್ಟಾಚಾರರಹಿತ ನೇಮಕಾತಿ ಮಾಡಿಕೊಳ್ಳಬೇಕು. ಮತ್ತು ಕೇಂದ್ರದಲ್ಲಿ ಖಾಲಿ ಇರುವ 9.64 ಲಕ್ಷ ಸರ್ಕಾರಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದಿದ್ದಾರೆ.

ನ್ಯಾ. ಎಚ್.ಎನ್. ನಾಗಮೋಹನದಾಸ ಆಯೋಗದ ವರದಿಯನ್ವಯ ಎಸ್.ಸಿ. ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಹಾಗೂ ಎಸ್.ಟಿ. ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ತೀರ್ಮಾನ ಸ್ವಾಗತಾರ್ಹವಾಗಿದೆ. ಈ ಐತಿಹಾಸಿಕ ಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ರಕ್ಷಣೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸುವುದು.

ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ .. ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರವು ರದ್ದುಪಡಿಸಿದ್ದು, ಶೈಕ್ಷಣಿಕ ಮತ್ತು ಉದ್ಯೋಗದ, ಹಿತದೃಷ್ಟಿಯಿಂದ ಈ 2ಬಿ ಮೀಸಲಾತಿಯನ್ನು ತಕ್ಷಣವೇ ಮರುಸ್ಥಾಪಿಸಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಮುಂದುವರೆದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಿದ್ದಪಡಿಸಿದ ಅತ್ಯಂತ ಮಹತ್ವದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ಮೇ 2026 ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರವು ಯಾವುದೇ ಹಿಂಜರಿಕೆಯಿಲ್ಲದೆ ಈ ವರದಿಯ ಅಂಕಿ-ಅಂಶಗಳನ್ನು ತಕ್ಷಣವೇ ಬಹಿರಂಗಪಡಿಸಬೇಕು. ಮತ್ತು ಈ ವರದಿಯ ಆಧಾರದ ಮೇಲೆಯೇ ಸರ್ಕಾರದ ಮುಂದಿನ ನೀತಿ ನಿರೂಪಣೆಗಳು ಹಾಗೂ ಸೌಲಭ್ಯಗಳ ಹಂಚಿಕೆ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದು ಯಲ್ಲಪ್ಪ ಹೆಗಡೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲಪ್ಪ ಮಂಟೂರ, ಸಾಬಪ್ಪ ಆಗೋಜಿ, ವಿ ಎ ಕಲಾದಗಿ, ಮಾರುತಿ ಕಂಬಳಿ, ಸಿದ್ದಪ್ಪ ಬಳಗಾನೂರ, ಎಚ್ ಎಸ್ ನದಾಫ, ರೈತ ಮುಖಂಡ ಶಿವನಗೌಡ ಪಾಟೀಲ ಹಾಗೂ ಇತರರು ಇದ್ದರು

Latest articles

More like this