Homeಲೇಖನಲೇಖನ : ಶತಕದ ಸಾಧಕ ಪುಲಿಗೆರೆ ಸೋಮನಾಥ

ಲೇಖನ : ಶತಕದ ಸಾಧಕ ಪುಲಿಗೆರೆ ಸೋಮನಾಥ

Published on

ಕನ್ನಡ ಸಾಹಿತ್ಯ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾದ ಸಂಪ್ರದಾಯವಾಗಿದೆ. ಭಾರತದ ಅತ್ಯಂತ ಹಳೆಯ ಸಾಹಿತ್ಯ ಸಂಪ್ರದಾಯಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳೊಂದಿಗೆ ಬೆರೆತು ವಿಕಸನಗೊಂಡಿದೆ.

ಕನ್ನಡ ಭಾಷೆ ಹಲ್ಮಿಡಿ ಶಾಸನದಲ್ಲಿ ಕಂಡು ಬಂದರೂ ಸಹಿತ ಅದಕ್ಕಿಂತ ಮೂರು ಶತಮಾನಕ್ಕೂ ಅಧಿಕವಾದ ಪ್ರಾಚೀನ ಭಾರತೀಯ ದ್ರಾವಿಡ ಭಾಷೆಯಾಗಿದೆ.

ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲ (ಜೈನ ಯುಗ / ಪಂಪ ಯುಗ)

ಕ್ರಿ.ಶ. ೫ ನೇ ಶತಮಾನದ ಹಲ್ಮಿಡಿ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದೆ. ಕ್ರಿ.ಶ. ೮೫೦ ರ ಸುಮಾರಿನ ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ನಮಗೆ ದೊರೆತಿರುವ ಮೊದಲ ಸಾಹಿತ್ಯಿಕ ಗ್ರಂಥವಾಗಿದೆ.

ಪಂಪ ಯುಗ: ೧೦ ನೇ ಶತಮಾನವನ್ನು ಕನ್ನಡ ಸಾಹಿತ್ಯದ ‘ಚಿನ್ನದ ಯುಗ’ ಎನ್ನಲಾಗುತ್ತದೆ.

ರತ್ನತ್ರಯರು: ಆದಿಕವಿ ಪಂಪ (ವಿಕ್ರಮಾರ್ಜುನ ವಿಜಯ, ಆದಿಪುರಾಣ), ಪೊನ್ನ ಮತ್ತು ರನ್ನ ಕನ್ನಡದ ಮಹಾಕವಿಗಳಾಗಿದ್ದಾರೆ.

ಶೈಲಿ: ಈ ಕಾಲದಲ್ಲಿ ‘ಚಂಪೂ’ (ಗದ್ಯ ಮತ್ತು ಪದ್ಯ ಮಿಶ್ರಿತ) ಶೈಲಿಯು ಪ್ರಸಿದ್ಧವಾಗಿತ್ತು.

೨. ನಡುಗನ್ನಡ ಕಾಲ (ವಚನ ಮತ್ತು ವೈಷ್ಣವ ಯುಗ)
೧೨ ನೇ ಶತಮಾನದಿಂದ ಕನ್ನಡ ಸಾಹಿತ್ಯವು ರಾಜಾಶ್ರಯದಿಂದ ಹೊರಬಂದು ಸಾಮಾನ್ಯ ಜನರ ಭಾಷೆಯಾಗಿ ಮಾರ್ಪಟ್ಟಿತು. ವಚನ ಸಾಹಿತ್ಯ: ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ವಚನ ಚಳವಳಿ ಆರಂಭವಾಯಿತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ವಚನಕಾರರು ಸರಳ ಕನ್ನಡದಲ್ಲಿ ಬದುಕಿನ ತತ್ವಗಳನ್ನು ಬರೆದರು.

ಹರಿಹರ ಮತ್ತು ರಾಘವಾಂಕ: ಹರಿಹರನು ‘ರಗಳೆ’ ಸಾಹಿತ್ಯವನ್ನೂ, ರಾಘವಾಂಕನು ‘ಷಟ್ಪದಿ’ ಶೈಲಿಯನ್ನೂ ಪರಿಚಯಿಸಿದರು.

ದಾಸ ಸಾಹಿತ್ಯ: ಭಕ್ತಿ ಪಂಥದ ಭಾಗವಾಗಿ ಪುರಂದರದಾಸರು, ಕನಕದಾಸರು ಮುಂತಾದ ಹರಿದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಕುಮಾರವ್ಯಾಸ: ‘ಕರ್ಣಾಟ ಭಾರತ ಕಥಾಮಂಜರಿ’ (ಗದಗಿನ ಭಾರತ) ಮಹಾಕಾವ್ಯದ ಮೂಲಕ ನಡುಗನ್ನಡದ ಶ್ರೇಷ್ಠ ಕವಿಯಾಗಿ ಹೊರಹೊಮ್ಮಿದನು.

ಇಂತಹ ಸುದೀರ್ಘ ಸಾಹಿತ್ಯ ಪರಂಪರೆಯ ಶ್ರೇಷ್ಠ ಶತಕ ಸಾಧಕ ಪುಲಿಗೆರೆ ಸೋಮನಾಥ (ಪುಲಗೇರೆ ಸೋಮನಾಥ) ಕನ್ನಡ ಸಾಹಿತ್ಯ ಲೋಕದ ಒಬ್ಬ ಪ್ರಸಿದ್ಧ ಹಳಗನ್ನಡದ ಕವಿ.

ಇವರು ಪ್ರಮುಖವಾಗಿ ತಮ್ಮ ನೀತಿಪ್ರಧಾನ ಕಾವ್ಯವಾದ
ಸೋಮೇಶ್ವರ ಶತಕ’ಕ್ಕಾಗಿ ಜನಪ್ರಿಯರಾಗಿದ್ದಾರೆ.ಕವಿಯ ಕುರಿತಾದ ಪ್ರಮುಖ ವಿವರಗಳು

ವೈಯಕ್ತಿಕ ವಿವರಗಳು ಮತ್ತು ಕಾಲ

ಇವರು ಸುಮಾರು ಕ್ರಿ.ಶ. ೧೨೯೯ ಅಥವಾ ೧೩ನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದರು ಎಂದು ಅಂದಾಜಿಸಲಾಗಿದೆ. ಇವರು ಹೊಯ್ಸಳ ರಾಜರ ಆಶ್ರಯದಲ್ಲಿದ್ದರು.

ಇವರು ಪ್ರಸ್ತುತ ಗದಗ ಜಿಲ್ಲೆಯ (ಹಳೆಯ ಧಾರವಾಡ ಜಿಲ್ಲೆ) ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಎಂಬ ಊರಿನವರು. ಸೋಮನಾಥನು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಮಹಾ ಪಂಡಿತನಾಗಿದ್ದನು.

ಸಾಹಿತ್ಯ ಕೃಷಿ ಮತ್ತು ಅಂಕಿತ ನಾಮ
ಇವರ ಪದ್ಯಗಳ ಅಂಕಿತ ನಾಮ “ಹರಹರಾ ಶ್ರೀ ಚೆನ್ನಸೋಮೇಶ್ವರಾ” ಅಥವಾ “ಹರಹರ ಶ್ರೀ ಚನ್ನಸೋಮೇಶ್ವರ”.ಸೋಮೇಶ್ವರ ಶತಕ: ಇದು ಇವರ ಅತ್ಯಂತ ಪ್ರಸಿದ್ಧ ಕೃತಿ.

ವೃತ್ತ ಛಂದಸ್ಸಿನಲ್ಲಿ (ಮತ್ತೇಭವಿಕ್ರೀಡಿತ ವೃತ್ತ) ರಚಿತವಾಗಿರುವ ಈ ಕಾವ್ಯವು ಒಟ್ಟು 100 ಪದ್ಯಗಳನ್ನು ಒಳಗೊಂಡಿದೆ. ಇವು ಸಮಾಜಕ್ಕೆ ಉತ್ತಮ ನೀತಿ, ಆದರ್ಶ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ.

ಇವರು ಚಂಪೂ ಶೈಲಿಯಲ್ಲಿ ‘ರತ್ನಾಕರಂಡಕ’ ಎಂಬ ಕಾವ್ಯವನ್ನೂ ರಚಿಸಿದ್ದಾರೆ.

ಪ್ರಸಿದ್ಧ ಸಾಲುಗಳು ಇವರ ಸೋಮೇಶ್ವರ ಶತಕದ ಈ ಸಾಲು ಕನ್ನಡ ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ:”ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ…”(ಇದರ ಅರ್ಥ: ಮನುಷ್ಯನು ಸ್ವಲ್ಪ ಜ್ಞಾನವನ್ನು ತಿಳಿದವರಿಂದ ಕಲಿತು, ಇನ್ನು ಸ್ವಲ್ಪ ಜ್ಞಾನವನ್ನು ಶಾಸ್ತ್ರಗಳನ್ನು ಕೇಳಿ ಪಡೆಯುತ್ತಾ ಜ್ಞಾನಿಯಾಗಬೇಕು.)

ಪುಲಿಗೆರೆ ಸೋಮನಾಥ ಮೂಲತಃ ಜೈನ ಧರ್ಮೀಯನಾಗಿದ್ದು ಶರಣರ ವಚನಗಳನ್ನು ಆಳವಾಗಿ ಓದಿಕೊಂಡು ನಡುಗನ್ನಡ ದೇಸಿ ಪದ್ಧತಿಯನ್ನು ತನ್ನ ಕಾವ್ಯ ಶೈಲಿಯನ್ನಾಗಿ ಪರಿವರ್ತಿಸಿದನು. ಬಸವಣ್ಣ ಅಕ್ಕ ಮಹಾದೇವಿ ಮತ್ತು ಇತರ ಶರಣರ ವಚನಗಳ ಪ್ರಭಾವ ಈತನ ಮೇಲೆ ಅಪಾರವಾಗಿ ಬೀರಿತ್ತು. ಇವನ ಶತಕಗಳು ಮುಂದೆ ಸರ್ವಜ್ಞ ಮತ್ತು ತತ್ವ ಪದಕಾರರಿಗೆ ಪ್ರಭಾವ ಬೀರಿರಬಹುದು ಎಂದೆನಿಸುತ್ತಿದೆ.ಒಟ್ಟಾರೆ ಸೋಮನಾಥನ ಶತಕಗಳು ಇಂದಿಗೂ ಕನ್ನಡ ಸಾಹಿತ್ಯ ಲೋಕದ ಅಪೂರ್ವ ಆಸ್ತಿ ಎಂದು ಹೇಳ ಬಹುದು.

_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this