ಋಣ ತೀರದು
____________________
ಮನೆಯ ಬೆಳಗುವ ದೀಪ ತಾಯಿ,
ತಂದೆ ಬದುಕಿನ ಭದ್ರತೆಯ ಸ್ಥಂಭ .
ತಾಯಿಯ ಮಡಿಲಲಿ ಸ್ವರ್ಗ ಸುಖ,
ತಂದೆಯ ಹೆಗಲಲಿ ಮರೆ ಜಗದ ದುಃಖ.
ಹಸಿದಾಗ ನೀಡುವಳು ತಾಯಿ ಕೈತುತ್ತು,
ಜೀವನಕೆ ಕೊಡುವನು ನುಡಿಮುತ್ತು.
ನೋವ ನುಂಗಿ ನಗುವ ಕೊಡುವಳು ಮಾತೆ,
ನಮ್ಮ ಏಳ್ಗೆಗಾಗಿ ಶ್ರಮಿಸುವನು ಅಪ್ಪ.
ಮೋಡವಿಲ್ಲದೆ ಧರೆಗೆ ಮಳೆಯೇ ಬಾರದು,
ಭೂಮಿಯಿಲ್ಲದೆ ಹಸಿರು ಬೆಳೆಯೇ ಸಿಗದು.
ಉಸಿರಿರೋ ತನಕ ಇವರ ಬೆಲೆ ಮುಗಿಯದು,
ತಂದೆ-ತಾಯಿ ಇಲ್ಲದೆ ಜಗದಿ ಪ್ರೀತಿ ಸಿಗದು.
ಕೋಟಿ ಜನ್ಮವೆತ್ತಿರೂ ಇವರ ಋಣ ತೀರದು,
ಇವರ ಸೇವೆಗೆ ಮಿಗಿಲು ಪುಣ್ಯ ಸಿಗದು.
ಕಣ್ಣಿಗೆ ಕಾಣುವ ದೇವರೇ ತಂದೆ-ತಾಯಿ,
ನಿಮ್ಮ ಪ್ರೀತಿಯ ವಾತ್ಸಲ್ಯಕ್ಕೆ ಇಲ್ಲ ಬೇರೆ ಸಾಟಿ
___________________________
ಭಾವ ಕಡಲಿನ ಪ್ರೀತಿ
_______________________
ಹೃದಯ ತೀರಕೆ ಅಪ್ಪಳಿಸುತಿದೆ,
ಭಾವಗಳ ಅಲೆಯು;
ಹೇಳಲಾಗದ ನೂರಾರು ಆಸೆಗಳ,
ಮೌನ ಕಡಲ ನನ್ನ ಒಡಲು.
ಸಂತಸದ ಅಲೆಗಳು ನಗೆಯ ಅಬ್ಬರ,
ದುಃಖದ ಸುಳಿಗಳು ಮಡುವು;
ಸಾಗಿದೆ ನೆನಪಿನ ದೋಣಿ ತೇಲುತ ,
ದಡವ ಕಾಣದ ಜೀವ ಪಯಣದಿ.
ಉಪ್ಪಾದ ಕಣ್ಣೀರಿನ ಹನಿಗಳು ,
ಒಲವಿನ ಸೆಲೆ ಸಿಹಿ ಚೇತನ ;
ಮನಸಿನ ಆಳದ ಮುತ್ತುಗಳನ್ನು,
ಹುಡುಕುತ ಸಾಗಿದೆ ಜೀವನ.
ಬರಡಾದ ದಂಡೆಗೆ ತಂಪನು ನೀಡಿ,
ಮತ್ತೆ ಕರಗುವ ಅಲೆ;
ಭಾವ ಕಡಲಿನ ಪ್ರೀತಿ,
ಎಂದಿಗೂ ಮುಗಿಯದ ಕತೆ.
________________________
ಬನಶ್ರೀ ಹತ್ತಿ ವಿಜಯಪುರ