Homeಕವನಎರಡು ಕವಿತೆಗಳು

ಎರಡು ಕವಿತೆಗಳು

Published on

ಕನಸು ಚೂರಾದರೂ…

ಕಂಡ ಕನಸು ಚೂರಾದರೂ,
ಮನದ ಆಸೆ ಮಣ್ಣಾದರೂ,
ಕಣ್ಣ ಹನಿಗಳು ಜಾರಿದರೂ,
ಜೀವನ ಯಾನ ನಿಲ್ಲದು.

ರಾತ್ರಿ ಕಂಡ ಆ ಕನಸುಗಳು,
ಬೆಳಗಿನಲ್ಲಿ ಕರಗಬಹುದು,
ಕೈಗೆ ಸಿಕ್ಕ ಸೌಭಾಗ್ಯವೆಲ್ಲ
ಕೈಬಿಟ್ಟು ಹೋಗಬಹುದು.

ನೂರಾರು ಕನಸು ಚೂರಾದ ಮನಸು,
ನೋವು ಮೌನವ ಧರಿಸಬಹುದು,
ಮುರಿದು ಬಿದ್ದ ಆ ಚೂರುಗಳಲ್ಲೇ,
ಹೊಸದೊಂದು ದಾರಿ ಹುಟ್ಟಬಹುದು.

ಬಿದ್ದಷ್ಟೂ ಬೇಗ ಎದ್ದು ನಿಲ್ಲು,
ಸೋಲು ಗೆಲುವಿನ ಮೆಟ್ಟಿಲು ,
ಕನಸುಗಳು ಮತ್ತೆ ಚಿಗುರೊಡೆಯುತ್ತವೆ,
ಧೃತಿಗೆಡದೆ ಮುನ್ನಡೆಯ ಬೇಕು .

ಕನಸು ಒಡೆದು ಚೂರಾದರೂ
ಮತ್ತೆ ಮತ್ತೆ ಮರಳಿ ಕನಸು
ಕಾಣುವುದೆ ಜೀವನ
ರಾತ್ರಿ ಕಳೆದು ಬೆಳಗಿನಲಿ ಕಂಡಂತೆ.

 

ಆಗಲೇ ಅರಳು ಮರಳು?

 

ಅರವತ್ತರ ಹೊಸ್ತಿಲಲಿ , ಕೇಳಿದರು
“ಆಗಲೇ ನಿನಗೆ ಅರಳು ಮರಳು?”
ಲೋಕದ ಕಣ್ಣಿಗೆ ಮರೆವು ಮೂರ್ಖತನ,
ಮನದ ಅಂತರಾಳದಲಿ ಹೊಸ ಅರುಹು!

ಕಹಿ ನೆನಪುಗಳೆಲ್ಲ ಮರೆತು ಹೋಗುತಿವೆ,
ಸವಿಯಾದ ಒಲುಮೆಯಷ್ಟೇ ನೆನಪಿನಂಗಳ,
ಮಕ್ಕಳ ತುಂಟತನ ಮನ ಮಾರು ಹೋಗಿದೆ,
ಹರೆಯದ ಗೊಂದಲ ಕರಗಿ ನೀರಾಗಿದೆ.

ಇದು ಬುದ್ಧಿ ತಪ್ಪಿ ಹೋದ ಮರುಳಾಟವಲ್ಲ,
ಜಗದ ಜಂಜಾಟದಿಂದ ಬಿಡುಗಡೆಯ ಸಾರ!
ದೇವರಿಗೂ ಭಕ್ತರಿಗೂ ಪ್ರೇಮದ ಆಭಾರ,
ಗುರುವಿನ ಕೃಪೆ ಒಳಗಣ್ಣು ಅರಳುವ ಹೊತ್ತು.

ದೇಹಕ್ಕೆ ವಯಸ್ಸು ಮನಸ್ಸಿಗಲ್ಲ ಎಂದಿಗೂ,
ಮರಳಿ ಬಾಲ್ಯಕೆ ಮರಳುವೆವು ಇಂದಿಗೂ,
ಅರವತ್ತಕ್ಕೆ ಅರಳು ಮರಳು ಲೋಕದಂತೆ,
‘ಮರಳಿ ಅರಳುವ’ ಸುಂದರ ಕಾಲವೆಂದೆ!

ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this