Homeಸುದ್ದಿಗಳುಜಿ.ಆರ್.ಬಿ.ಸಿ. ಗೆ ನೀರು ಹರಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಬಾಲಚಂದ್ರ ಜಾರಕಿಹೊಳಿ ಮನವಿ

ಜಿ.ಆರ್.ಬಿ.ಸಿ. ಗೆ ನೀರು ಹರಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಬಾಲಚಂದ್ರ ಜಾರಕಿಹೊಳಿ ಮನವಿ

Published on

ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆ (ಜಿಆರ್ಬಿಸಿ) ಯ ದುರಸ್ತಿ ಕಾಮಗಾರಿಯು ಭಾಗಶಃ ಪೂರ್ತಿಯಾಗಿದ್ದರಿಂದ ಈ ಕಾಲುವೆ ಭಾಗದ ಜನ ಮತ್ತು ಜಾನುವಾರುಗಳ ಹಿತದೃಷ್ಟಿಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಕೋರಿದ್ದಾರೆ.

ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳಲ್ಲಿ ಮಳೆಯಾಗದ್ದರಿಂದ ಬೇಸಿಗೆಯ ಸಮಯದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗಿದೆ. ಹಿಡಕಲ್ ಜಲಾಶಯದಿಂದ ಪ್ರತಿ ಸಲವೂ ಮೂರೂ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆಯಾದರೂ ಈ ಬಾರಿ ಘಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾಮಗಾರಿಯು ಪ್ರಗತಿಯಲ್ಲಿದ್ದರಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸಿಲ್ಲ. ಆದರೀಗ, ಬಲದಂಡೆಯ ಕಾಮಗಾರಿಯು ಮುಗಿದಿರುವುದರಿಂದ ಈ ಪ್ರದೇಶದ ಸಾರ್ವಜನಿಕರು ಮತ್ತು ದನ- ಕರುಗಳಿಗೆ ಕುಡಿಯುವ ನೀರಿಗಾಗಿ ಜೂನ್ 5 ರಿಂದ 10 ದಿನಗಳವರೆಗೆ ಜಿಆರ್ಬಿಸಿ ಕಾಲುವೆಗೆ ಪ್ರತಿ ದಿನ 2000 ಕ್ಯೂಸೆಕ್ಸ್ ನಂತೆ ಕುಡಿಯುವ ನೀರನ್ನು ಹರಿಸುವಂತೆ ಬಾಲಚಂದ್ರ ಜಾರಕಿಹೊಳಿಯವರು ಆಗ್ರಹಿಸಿದ್ದಾರೆ.

ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಬಿಡುಗಡೆ ಮಾಡುವುದರಿಂದ ಕಾಲುವೆಯ ವ್ಯಾಪ್ತಿಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಳವಾಗುವುದರೊಂದಿಗೆ ತೆರೆದ ಬಾವಿ ಮತ್ತು ಕೊಳವೆ ಬಾವಿಗಳು ಪುನರ್ಭರ್ತಿಯಾಗುತ್ತದೆ. ಸಾರ್ವಜನಿಕರು ಮತ್ತು ಜಾನುವಾರುಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

Latest articles

More like this