Homeಲೇಖನಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ ಸ್ವಾನಂದಾಶ್ರಮ

ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ ಸ್ವಾನಂದಾಶ್ರಮ

Published on

ಜೂನ್ 18 ರಂದು ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ ನೆಲೆಗೊಂಡಿರುವ ಸ್ವಾನಂದಾಶ್ರಮ (ಶ್ರೀ ಗಣೇಶ ಮಹಾ ಸಂಸ್ಥಾನ) ಇಂದು ಗಣೇಶೋಪಾಸನೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ರಜತ ಮಹೋತ್ಸವದ ಸಂಭ್ರಮವನ್ನು ಆಚರಿಸಿರುವ ಈ ಕ್ಷೇತ್ರವು ಕೇವಲ ದೇವಾಲಯವಲ್ಲ; ಗಣೇಶತತ್ತ್ವ, ಭಾರತೀಯ ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಆಧ್ಯಾತ್ಮಿಕ ಸಾಧನೆಯ ಸಮಗ್ರ ಕೇಂದ್ರವಾಗಿದೆ.

ಸ್ವಾನಂದ ಬಾಲ ಗಣಪತಿಯ ಸನ್ನಿಧಿಯಲ್ಲಿ ಪ್ರತಿದಿನ ನಡೆಯುವ ಪೂಜೆ, ಹೋಮ, ಧಾರ್ಮಿಕ ಆಚರಣೆಗಳು ಹಾಗೂ ಗಣೇಶ ತತ್ತ್ವದ ಕುರಿತ ಜ್ಞಾನಪ್ರಚಾರ ಕಾರ್ಯಕ್ರಮಗಳು ಈ ಕ್ಷೇತ್ರವನ್ನು ವಿಶೇಷವಾಗಿಸಿವೆ. ಗ್ರಾಮೀಣ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕ ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಿರುವ ಆಶ್ರಮವು ಭಕ್ತಿ ಮತ್ತು ಸೇವೆಯ ಅಪೂರ್ವ ಮಾದರಿಯಾಗಿದೆ.

ಹೊಯ್ಸಳ ಶಿಲ್ಪಕಲೆಯ ಪುನರುಜ್ಜೀವನದ ಮಹಾಸಂಕಲ್ಪ
ಭಾರತೀಯ ವಾಸ್ತುಶಿಲ್ಪದ ಸುವರ್ಣ ಅಧ್ಯಾಯವೆನಿಸಿರುವ ಹೊಯ್ಸಳ ಶೈಲಿಯ ದೇವಾಲಯ ನಿರ್ಮಾಣವನ್ನು ಸ್ವಾನಂದಾಶ್ರಮ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಕೈಗೊಂಡಿದೆ. ಎಂಟು ಶತಮಾನಗಳ ಹಿಂದೆ ಜಗತ್ತಿನ ಗಮನ ಸೆಳೆದಿದ್ದ ಹೊಯ್ಸಳ ಶಿಲ್ಪಕಲೆಯ ಸೂಕ್ಷ್ಮತೆ, ಕಲಾತ್ಮಕತೆ ಮತ್ತು ವೈಜ್ಞಾನಿಕ ವಿನ್ಯಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ಆಶ್ರಮ ನಿರತವಾಗಿದೆ.

ನಕ್ಷತ್ರಾಕಾರದ ಜಗತಿ, ಬಳಪದ ಕಲ್ಲಿನ ಸೂಕ್ಷ್ಮ ಕೆತ್ತನೆಗಳು, ತೋರಣಗಳಿಂದ ಅಲಂಕರಿಸಲ್ಪಟ್ಟ ಗೋಪುರ, ಪುರಾಣ–ಇತಿಹಾಸದ ಶಿಲ್ಪಚಿತ್ರಗಳು ಹಾಗೂ ಜಲಸಂರಕ್ಷಣೆಯ ವೈಜ್ಞಾನಿಕ ವ್ಯವಸ್ಥೆಯನ್ನು ಒಳಗೊಂಡ ಈ ದೇವಾಲಯವು ಭವಿಷ್ಯದಲ್ಲಿ ಕರ್ನಾಟಕದ ಹೊಯ್ಸಳ ಕಲಾ ವೈಭವದ ಜೀವಂತ ಮಾದರಿಯಾಗಿ ರೂಪುಗೊಳ್ಳಲಿದೆ.

ವಿಶೇಷವಾಗಿ ಮುದ್ಗಲ ಪುರಾಣೋಕ್ತ 32 ಗಣಪತಿ ಸ್ವರೂಪಗಳು ಹಾಗೂ ಚತುರ್ಯುಗ ಗಣಪತಿಗಳ ಸಮುಚ್ಚಯವು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಲಿದೆ.

ಶಿಲೆಯ ಭಾಷೆ ಮಾತಾಡುವ ತಾಣ ;
ಸ್ವಾನಂದಾಶ್ರಮದ ಶಿಲ್ಪಗಳು ಕೇವಲ ಕಲ್ಲಿನ ಕೆತ್ತನೆಗಳಲ್ಲ; ಅವು ಭಾರತೀಯ ಸಂಸ್ಕೃತಿ, ಭಕ್ತಿ, ಕಲ್ಪನೆ ಮತ್ತು ಆಧ್ಯಾತ್ಮಿಕತೆಯ ಜೀವಂತ ಅಭಿವ್ಯಕ್ತಿಗಳಾಗಿವೆ.

ನಿತ್ಯ ಪೂಜೆ, ಜ್ಞಾನಯಜ್ಞ ಮತ್ತು ಸೇವಾಕಾರ್ಯ
ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಲೋಕಕಲ್ಯಾಣಾರ್ಥ ಗಣಹೋಮ, ಸಂಕಷ್ಟಹರ ಚತುರ್ಥಿ ಹಾಗೂ ಶುದ್ಧ ಚತುರ್ಥಿಗಳ ವಿಶೇಷ ಪೂಜೆ, ಶ್ರಾವಣ ಮಾಸದ ವರದ ಗಣಪತಿ ವ್ರತ, ವಾರ್ಷಿಕ ಗಣೇಶೋತ್ಸವ, ಲಕ್ಷದೀಪೋತ್ಸವ, ಧಾತ್ರಿ ಹವನ, ಉಯ್ಯಾಲೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಆಚರಣೆಗಳು ವರ್ಷಪೂರ್ತಿ ನಡೆಯುತ್ತವೆ.

ಗಣೇಶ ತತ್ತ್ವದ ಅಧ್ಯಯನ, ಸಂಶೋಧನೆ, ಗ್ರಂಥ ಪ್ರಕಾಶನ ಮತ್ತು ಉಪಾಸನಾ ಸಾಹಿತ್ಯದ ಪ್ರಸಾರದ ಮೂಲಕ ಆಶ್ರಮವು ನಿರಂತರ ಜ್ಞಾನಯಜ್ಞವನ್ನು ನಡೆಸುತ್ತಿದೆ.

ಇದೇ ವೇಳೆ “ವಿದ್ಯಾಚೇತನ” ಯೋಜನೆಯ ಮೂಲಕ ಸಾವಿರಕ್ಕೂ ಹೆಚ್ಚು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಶೈಕ್ಷಣಿಕ ನೆರವು ನೀಡುವ ಮೂಲಕ “ಮಾನವ ಸೇವೆಯೇ ಮಾಧವ ಸೇವೆ” ಎಂಬ ಆದರ್ಶವನ್ನು ಸಾಕಾರಗೊಳಿಸುತ್ತಿದೆ.

ವಿನಾಯಕನ ಲೋಕ – ಸ್ವಾನಂದ ಲೋಕ
ಬ್ರಹ್ಮನಿಗೆ ಸತ್ಯಲೋಕ, ವಿಷ್ಣುವಿಗೆ ವೈಕುಂಠ, ಶಿವನಿಗೆ ಕೈಲಾಸ ಇರುವಂತೆ ಶ್ರೀ ಗಣಪತಿಯ ದಿವ್ಯ ನಿವಾಸ “ಸ್ವಾನಂದ ಲೋಕ”ವಾಗಿದೆ. ಶ್ರೀ ಗಣೇಶ ಪುರಾಣದ ಉಪಾಸನಾ ಖಂಡದಲ್ಲಿ ಇದರ ವಿಶದ ವರ್ಣನೆ ದೊರೆಯುತ್ತದೆ.

ಸ್ವಾನಂದ ಲೋಕವನ್ನು ನಿಜಲೋಕ ಮತ್ತು ದಿವ್ಯಲೋಕ ಎಂದೂ ಕರೆಯುತ್ತಾರೆ. ವೇದಾಧ್ಯಯನ, ಯಜ್ಞ, ತಪಸ್ಸು, ದಾನಗಳಿಂದಲ್ಲ; ನಿರ್ಮಲ ಭಕ್ತಿಯಿಂದ ಮಾಡಿದ ಗಣೇಶ ಸೇವೆಯಿಂದ ಮಾತ್ರ ಈ ಲೋಕವನ್ನು ಪಡೆಯಬಹುದು.

ಇಪ್ಪತ್ತೊಂದು ಲೋಕಗಳನ್ನು ದಾಟಿ, ಶೂನ್ಯಲೋಕ ಹಾಗೂ ಭ್ರಾಮರಿಕ ಶಕ್ತಿಸ್ಥಾನವನ್ನು ಮೀರಿದ ಬಳಿಕ ಸ್ವಾನಂದ ಲೋಕ ತಲುಪುತ್ತದೆ. ಇದು ರತ್ನಖಚಿತ ಸುವರ್ಣಭೂಮಿಯಿಂದ ಕೂಡಿದ, ಐದು ಸಾವಿರ ಯೋಜನಗಳಷ್ಟು ವಿಸ್ತಾರವಾದ ದಿವ್ಯ ಧಾಮವಾಗಿದೆ.

ಈ ಲೋಕದ ಮಧ್ಯದಲ್ಲಿ ಇಕ್ಷುಸಾರ (ಕಬ್ಬಿನ ರಸ) ಸಮುದ್ರವಿದ್ದು, ಅದರೊಳಗೆ ಸಹಸ್ರದಳಗಳ ಶ್ವೇತ ಕಮಲ ಅರಳಿದೆ. ಕಮಲದ ಕರ್ಣಿಕೆಯಲ್ಲಿ ರತ್ನಖಚಿತ ಸುವರ್ಣ ಮಂಚದ ಮೇಲೆ ಬಾಲಸ್ವರೂಪಿ, ತ್ರಿನೇತ್ರಧಾರಿ, ರಕ್ತವರ್ಣದ ಪೀತಾಂಬರಧಾರಿ ಶ್ರೀ ವಿನಾಯಕನು ಯೋಗನಿದ್ರಾರೂಢನಾಗಿ ವಿರಾಜಮಾನನಾಗಿದ್ದಾನೆ.

ಸಿದ್ಧಿ ಮತ್ತು ಬುದ್ಧಿ ದೇವಿಯರು ಪಾದಸೇವೆ ಮಾಡುತ್ತಾ, ಅಷ್ಟಸಿದ್ಧಿಗಳು ಪರಿಚರಿಸುತ್ತಾ, ವೇದಗಳು, ಶಾಸ್ತ್ರಗಳು ಹಾಗೂ ಪುರಾಣಗಳು ಗಣಪತಿಯ ಮಹಿಮೆಯನ್ನು ಸ್ತುತಿಸುತ್ತಿರುತ್ತವೆ.ಆನಂದಮಯ ಕೋಶದ ಅಧಿಪತಿಯಾದ ಗಣಪತಿಯನ್ನು “ಸ್ವಾನಂದೇಶ” ಎಂದು ಕರೆಯುತ್ತಾರೆ. ಆತನ ಕೃಪೆಯಿಂದ ಭಕ್ತರಿಗೆ ಆನಂದ, ಪರಮಾನಂದ ಮತ್ತು ಬ್ರಹ್ಮಾನಂದ ಲಭಿಸುತ್ತದೆ.

ಈ ಪುರಾಣೋಕ್ತ ಸ್ವಾನಂದ ಲೋಕದ ಪರಿಕಲ್ಪನೆಯನ್ನು ಮೂರ್ತರೂಪದಲ್ಲಿ ಸಾಕಾರಗೊಳಿಸುವ ಪ್ರಯತ್ನವಾಗಿ ಬೆಂಗಳೂರಿನ ಅಗರ–ತಾತಗುಣಿಯ ಶ್ರೀ ಸ್ವಾನಂದಾಶ್ರಮದಲ್ಲಿ ಹೊಯ್ಸಳ ಶೈಲಿಯ ಭವ್ಯ ಗಣಪತಿ ದೇವಾಲಯ ನಿರ್ಮಾಣಗೊಂಡಿದ್ದು, ಇಂದು ಗಣೇಶ ಭಕ್ತರ ಪ್ರಮುಖ ಸದ್ಭಕ್ತಿ ತಾಣವಾಗಿ ಬೆಳಗುತ್ತಿದೆ.

ಜೂನ್ 18ರಿಂದ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ, ಅನುಗ್ರಹ ಮತ್ತು ಮಾರ್ಗದರ್ಶನದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಹೊಯ್ಸಳ ಶೈಲಿಯ ನೂತನ ದೇವಾಲಯದ ಪ್ರಥಮ ಹಂತದ ಉದ್ಘಾಟನಾ ಸಮಾರಂಭ ಜೂನ್ 18, 2026ರಂದು ವೈಭವದಿಂದ ನೆರವೇರಲಿದೆ.

ಗಣೇಶ ಪುರಾಣ ಮತ್ತು ಮುದ್ಗಲ ಪುರಾಣಗಳಲ್ಲಿ ವರ್ಣಿತವಾಗಿರುವ ಗಣೇಶ ಮಹಿಮೆಯನ್ನು ಸಾಕಾರಗೊಳಿಸುವ ಈ ದೇವಾಲಯವು ಭಕ್ತಿ, ಶಿಲ್ಪಕಲೆ ಮತ್ತು ಆಧ್ಯಾತ್ಮಿಕತೆಯ ಅನನ್ಯ ಸಂಯೋಜನೆಯಾಗಿ ನಿರ್ಮಾಣಗೊಳ್ಳುತ್ತಿದೆ.

ಜೂನ್ 18 – ಪ್ರತಿಷ್ಠಾಪನಾ ಮಹೋತ್ಸವ
ಬೆಳಿಗ್ಗೆ 8.08 ರಿಂದ 9.06 ಗಂಟೆಯವರೆಗೆ ಕರ್ಕಾಟಕ ಲಗ್ನದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿಯ ಅಷ್ಟಬಂಧ ಪ್ರತಿಷ್ಠಾಪನೆ ನಡೆಯಲಿದೆ.

ಈ ಸಂದರ್ಭದಲ್ಲಿ:ಗಣೇಶ ಪುರಾಣೋಕ್ತ 32 ಗಣಪತಿ ಸ್ವರೂಪಗಳ ಪ್ರತಿಷ್ಠಾಪನೆ,ಮುದ್ಗಲ ಪುರಾಣೋಕ್ತ ಚತುರ್ಯುಗ ಗಣಪತಿಗಳ ಪ್ರತಿಷ್ಠಾಪನೆ;ವಿಶೇಷ ವೇದಿಕ ಮತ್ತು ಆಗಮೋಕ್ತ ಧಾರ್ಮಿಕ ವಿಧಿವಿಧಾನಗಳು

ಮಧ್ಯಾಹ್ನ 3.00 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ:ಶ್ರೀ ಕ್ಷೇತ್ರ ಹರಿಹರಪುರದ ಪರಮಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿಯವರು,ಭಾರತೀಯ ಯೋಗಧಾಮ (ರಿ), ಮೈಸೂರಿನ ಅಧ್ಯಕ್ಷರು ಹಾಗೂ ಖ್ಯಾತ ಯೋಗ–ಆಧ್ಯಾತ್ಮಿಕ ಚಿಂತಕರಾದ ಡಾ. ಕೆ.ಎಲ್. ಶಂಕರನಾರಾಯಣ ಜೋಯಿಸ್ಉಪಸ್ಥಿತರಿದ್ದು ಆಶೀರ್ವಚನ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.

ಜೂನ್ 20 – ವಿದ್ಯಾಚೇತನ ಸೇವಾ ಕಾರ್ಯಕ್ರಮ
ಆಶ್ರಮದ ಮಹತ್ವಾಕಾಂಕ್ಷೆಯ ಸಾಮಾಜಿಕ ಸೇವಾ ಯೋಜನೆಯಾದ ವಿದ್ಯಾಚೇತನ ಕಾರ್ಯಕ್ರಮದ ಅಂಗವಾಗಿ ಸುಮಾರು 25 ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯಧನದ ಸಂಕೇತವಾಗಿ ವಿದ್ಯಾ ಕಿಟ್‌ಗಳನ್ನು ವಿತರಿಸಲಾಗುವುದು.

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಕಿಟ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಲಿದ್ದಾರೆ.

ಜೂನ್ 21 – ಬ್ರಹ್ಮಕುಂಭಾಭಿಷೇಕ
ಭಾನುವಾರ ಮುಂಜಾನೆ 3.45 ಗಂಟೆಗೆ ಕವಾಟೋದ್ಘಾಟನೆ ನಡೆಯಲಿದೆ.

ಅನಂತರ:ಬ್ರಹ್ಮಕುಂಭಾಭಿಷೇಕ,ದ್ರವ್ಯ ಕಲಶಾಭಿಷೇಕ,ವಿಶೇಷ ಪೂಜೆಗಳು ನೆರವೇರಲಿದ್ದು, ಬೆಳಿಗ್ಗೆ 9.30 ಗಂಟೆಯಿಂದ ಭಕ್ತರಿಗೆ ಶ್ರೀ ಏಕಾಕ್ಷರ ಮಹಾಗಣಪತಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಭಕ್ತರಿಗೆ ಮಹತ್ವದ ಸೂಚನೆ
ಜೂನ್ 18ರ ಸಂಜೆ 5.30 ಗಂಟೆಯಿಂದ ಜೂನ್ 21ರ ಮುಂಜಾನೆ 3.00 ಗಂಟೆಯವರೆಗೆ ನಿರಂತರ ವೈದಿಕ ಹಾಗೂ ತಾಂತ್ರಿಕ ಧಾರ್ಮಿಕ ವಿಧಿವಿಧಾನಗಳು ನಡೆಯಲಿರುವುದರಿಂದ ದೇವಾಲಯದ ದ್ವಾರಗಳನ್ನು ಸಾರ್ವಜನಿಕ ದರ್ಶನಕ್ಕಾಗಿ ಮುಚ್ಚಲಾಗುತ್ತದೆ.ಜೂನ್ 19 ಮತ್ತು 20ರಂದು ಗರ್ಭಗುಡಿಯೊಳಗಿನ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಆಶ್ರಮದ ಆಡಳಿತ ಮಂಡಳಿ ತಿಳಿಸಿದೆ.

ಭಕ್ತರಿಗೆ ಆಹ್ವಾನ
ಅತ್ಯಂತ ಅಪರೂಪದ ಹಾಗೂ ಪುಣ್ಯಪ್ರದವಾದ ಈ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಗಣೇಶ ಉಪಾಸಕರು, ಧರ್ಮಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಏಕಾಕ್ಷರ ಮಹಾಗಣಪತಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸ್ವಾನಂದಾಶ್ರಮದ ಆಡಳಿತ ಮಂಡಳಿ ಮನವಿ ಮಾಡಿದೆ.

ಸ್ಥಳ:
ಶ್ರೀ ಸ್ವಾನಂದಾಶ್ರಮ (ಶ್ರೀ ಗಣೇಶ ಮಹಾ ಸಂಸ್ಥಾನ)
ಆಗರ – ತಾತಗುಣಿ,
ಕನಕಪುರ ರಸ್ತೆ,
ಬೆಂಗಳೂರು ದಕ್ಷಿಣ

Latest articles

More like this