HomeUncategorizedಮುಲ್ಕಿ ಪರೀಕ್ಷೆ ಪಾಸಾಗದ ಹಾಲಯ್ಯ ಚಿತ್ರದುರ್ಗದ ಬೃಹನ್ಮಠ ಕೈ ತಪ್ಪಿದ್ದಕ್ಕೆ ವೀರಶೈವ ಮಹಾಸಭಾ ಸ್ಥಾಪನೆ

ಮುಲ್ಕಿ ಪರೀಕ್ಷೆ ಪಾಸಾಗದ ಹಾಲಯ್ಯ ಚಿತ್ರದುರ್ಗದ ಬೃಹನ್ಮಠ ಕೈ ತಪ್ಪಿದ್ದಕ್ಕೆ ವೀರಶೈವ ಮಹಾಸಭಾ ಸ್ಥಾಪನೆ

Published on

ಬಸವಣ್ಣನೆ ತಾಯಿ, ಬಸವಣ್ಣನೆ ತಂದೆ,
ಬಸವಣ್ಣನೆ ಪರಮ ಬಂಧುವೆಮಗೆ/
ವಸುಧೀಶ ಕಪಿಲಸಿದ್ದ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ/

ಸೊನ್ನಲಗಿಯ ಸಿದ್ದರಾಮೇಶ್ವರರ ಈ ವಚನದ ತಾತ್ಪರ್ಯದಂತೆ, ಅಂದಿನ ಧಾರವಾಡ ಜಿಲ್ಲೆಯ ರಾಣೆಬೆಣ್ಣೂರು ತಾಲ್ಲೂಕಿನ ಜೋಯಿಸರ ಹರಳಳ್ಳಿಯಲ್ಲಿ ಬಸವಯ್ಯ ಮತ್ತು ನೀಲಮ್ಮ ಎಂಬ ದಂಪತಿಗಳಿದ್ದರು. ಅಪ್ಪಟ ಬಸವ ಭಕ್ತರು. ಬಸವಾದಿ ಪ್ರಮಥರ ಅನುಯಾಯಿಗಳು. ಶರಣ ಪರಂಪರೆ ಅವರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಅವರದು ಮೂಲತಃ ಕಡು ಬಡತನದ ಕುಟುಂಬವಾದರೂ ಶರಣ ಧರ್ಮ ಆಚರಿಸುವಲ್ಲಿ ಬಡತನ ಇರಲಿಲ್ಲ. ಗ್ರಾಮದ ಮುಗ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ವಚನ ಪಾಠ ಕಲಿಸುವ ಕಾಯಕದಲ್ಲಿ ತೊಡಗಿದ್ದರು. ಅದಕ್ಕೆಂದೆ ಅವರ ಮನೆತನಕ್ಕೆ “ಸಾಲಿಮಠ” ಎಂದು ಕರೆಯುವುದು ವಾಡಿಕೆಯಾಯಿತು.

ಅಂತಹ ಕುಟುಂಬದಲ್ಲಿ ಕ್ರಿ.ಶ.೧೧ ಸಪ್ಟಂಬರ್, ೧೮೬೭ ರಂದು ಹಾಲಯ್ಯ ಎಂಬ ಹಾಲು ಗಲ್ಲದ ಬಾಲಕನ ಜನನವಾಯಿತು. ಆತ ಬೆಳೆಯುತ್ತಿದ್ದಂತೆ ಆಯ್ದುಕೊಂಡಿದ್ದು ಜೋಳಿಗೆ ಕಾಯಕ. ಯಾಕೆಂದರೆ ಬಡತನದ ಬೇಗೆಗೆ ವಿದ್ಯಾರ್ಜನೆ ಆಗಲಿಲ್ಲ. ಹೀಗಾಗಿ ಹಾಲಯ್ಯ ಹುಟ್ಟೂರಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಲಿಲ್ಲ. ವೃತ್ತಿ ಬದುಕು ಅರಸಿಕೊಂಡು ಹುಬ್ಬಳ್ಳಿಯತ್ತ ಪಯಣಿಸಿದ. ಅಲ್ಲಿ ತನ್ನ ಅಧ್ಯಾತ್ಮದ ದಾಹ ತಣಿಸಲು ಸಿದ್ಧಾರೂಢರು ಗುರುವಾಗಿ ಸಿಕ್ಕರು.

ಗುರು ಉಪದೇಶ ಮಂತ್ರ ವೈದ್ಯ
ಜಂಗಮ ಉಪದೇಶ ಶಸ್ತ್ರ ವೈದ್ಯ ನೋಡಾ/
ಭವರೋಗವ ಕಳೆವ ಪರಿಯ ನೋಡಾ,
ಕೂಡಲ ಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ/

ಗುರುವಿನ ಉಪದೇಶವು ಜಪಿಸುವ ಮಂತ್ರ ಇದ್ದಂತೆ, ಜಂಗಮರ ಉಪದೇಶ ಶಸ್ತ್ರ ವಿದ್ದಂತೆ, ಅವರೆಡೂ ಭವ ಬಂಧನ ಎಂಬ ಝಂಜಡವನ್ನು ನಿವಾರಿಸುತ್ತವೆ. ಕೂಡಲ ಸಂಗನ ಶರಣರ ಅನುಭವವು ಮಡಿವಾಳನ ಕಾಯಕ ಇದ್ದಂತೆ. ಅಂದರೆ ಭಾವ ಮತ್ತು ಬದುಕನ್ನು ಶುದ್ಧಗೊಳಿಸುತ್ತದೆ ಎಂದು ವಿಶ್ವಗುರು ಬಸವಣ್ಣನವರು ಗುರು ಮತ್ತು ಜಂಗಮ ಉಪದೇಶಗಳ ಮಹತ್ವವನ್ನು ಈ ವಚನದಲ್ಲಿ ನಿನಾದಿಸಿದ್ದಾರೆ. ಅದರಂತೆ, ಸಿದ್ಧಾರೂಢರ ಉಪದೇಶ ಪಡೆದ ಬಳಿಕ, ಕ್ರಮೇಣ ಸನ್ಯಾಸ ವೃತಕ್ಕೆ ಒಗ್ಗಿಕೊಂಡ ಹಾಲಯ್ಯ, ನಿತ್ಯ ಭಿಕ್ಷಾನ್ನವನ್ನೇ ಅವಲಂಭಿಸಿದ್ದ. ಹುಬ್ಬಳ್ಳಿಯಲ್ಲಿ ಕೆಲವು ಆಯ್ದ ಮನೆಗಳಿಂದ ಕಂತಿ ಭಿಕ್ಷಾ ಗೈದು ದಿನಗಳೆದ.ಅಲೆಮಾರಿಯಾಗಿ ಜೀವನ ಸವೆಸಿದ. ಪಾರಮಾರ್ಥಿಕ ಸಾಧನೆಗಾಗಿ ಸಿದ್ಧಾರೂಢರ ಮಾರ್ಗದರ್ಶನದಂತೆ ಲೋಕ ಸಂಚಾರ ಕೈಗೊಂಡ. ೧೨ ವರ್ಷಗಳವರೆಗೆ ಮೈಸೂರಿನ ಗುಹೆವೊಂದರಲ್ಲಿ ಧ್ಯಾನಸ್ಥನಾಗಿ ಜನಪ್ರಿಯತೆ ಗಳಿಸಿದ. ೧೨ನೆ ಶತಮಾನದಿಂದಲೂ ಅಲ್ಲಮ ಪ್ರಭುಗಳ ವಿರಕ್ತ ಪರಂಪರೆಯಿಂದ ಬೆಳೆದ ಅನೇಕ ಮಠಗಳಲ್ಲಿ ಹಾನಗಲ್ಲದ ಶ್ರೀಮಠವೂ ಒಂದಾಗಿತ್ತು. ಆ ಮಠಕ್ಕೆ ಚರ ಪೀಠಾಧಿಪತಿಯಾಗಲು ಹಾಲಯ್ಯಗೆ ಆಮಂತ್ರಿಸಲಾಯಿತು. ಆ ಮಠದ ಅಧಿಕಾರ ವಹಿಸಿಕೊಂಡ ಬಳಿಕ ಹಾಲಯ್ಯ ಬದಲು, ಶ್ರೀಕುಮಾರ ಸ್ವಾಮಿಯಾಗಿ ಜನಪ್ರಿಯತೆ ಹೊಂದಿದ್ದು ಚರಿತ್ರೆ.

ಆಗಿನ ಕಾಲಘಟ್ಟದಲ್ಲಿ ಚಿತ್ರದುರ್ಗದ ಬೃಹನ್ಮಠ ನಾಡಿನ ಅತ್ಯಂತ ಶ್ರೀಮಂತ ಮಠವಾಗಿತ್ತು. ಅಪಾರ ಪಾಂಡಿತ್ಯ ಮತ್ತು ವಿಧ್ವತ್ತು ಹೊಂದಿದ ಸ್ವಾಮಿಗಳಿಂದ ಕಂಗೊಳಿಸುತ್ತಿತ್ತು. ಅತೀ ಹೆಚ್ಚು ಆಸ್ತಿ ಮತ್ತು ಆದಾಯ ಹೊಂದಿತ್ತು. ಸ್ವತಃ ಮೈಸೂರಿನ ಒಡೆಯರ ಆಡಳಿತಕ್ಕೆ ಅಪಾರ ಪ್ರಮಾಣದ ದಾನ ದೇಣಿಗೆ ನೀಡುತ್ತಿತ್ತು. ಆ ಮಠದಲ್ಲಿ ಸ್ವತಃ ಅಲ್ಲಮ ಪ್ರಭು ಅವರಿಂದ ಸ್ಥಾಪಿಸಲ್ಪಟ್ಟ ಶೂನ್ಯ ಪೀಠದ ಪರಂಪರೆ ಬೆಳೆದಿತ್ತು. ಅಲ್ಲದೆ ಲಿಂಗಾಯತ ಧರ್ಮ ಹಾಗೂ ಶರಣ ಪರಂಪರೆಯ ಮಠವಾಗಿ ನಾಡಿನಾದ್ಯಂತ ಪ್ರಸಿದ್ಧಿ ಗಳಿಸಿತ್ತು. ೧೯೦೩ ರಲ್ಲಿ ಆ ಬೃಹನ್ಮಠದ ಪಟ್ಟಾಧಿಕಾರಿಯಾಗಿ ನೂತನ ಸ್ವಾಮಿಗಳ ನೇಮಕ ಪ್ರಕ್ರಿಯೆ ಜರುಗಿತು. ಗದುಗಿನ ತೋಂಟದಾರ್ಯ ಮಠದ, ಉತ್ತರಾಧಿಕಾರಿಯೆಂದೆ ಗುರುತಿಸಿಕೊಂಡು, ಮರಿಸ್ವಾಮಿಯಾಗಿದ್ದ ಜಯದೇವ ಸ್ವಾಮಿಗಳು ಶರಣ ಸಾಹಿತ್ಯ ಮತ್ತು ಬಸವ ಭಕ್ತಿಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಕಾಶಿಯಲ್ಲಿ ವ್ಯಾಸಂಗ ಗೈದಿದ್ದರು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಸಮಕಾಲೀನರು. ಅವರ ಆಪ್ತ ಒಡನಾಡಿಗಳೂ ಆಗಿದ್ದರು. ಹೀಗಾಗಿ ಜಯದೇವ ಸ್ವಾಮಿಗಳನ್ನೇ ಚಿತ್ರದುರ್ಗದ ಬೃಹನ್ಮಠಕ್ಕೆ ಪೀಠಾಧಿಪತಿಯನ್ನಾಗಿ ನೇಮಿಸಲು ನಿರ್ಧರಿಸಲಾಯಿತು. ಆದರೆ ಕೆಲವು ಭಕ್ತರಿಂದ ವಿರೋಧ ವ್ಯಕ್ತವಾಯಿತು. ಹಾನಗಲ್ಲದ ಕುಮಾರಸ್ವಾಮಿಗಳು ಅವರ ವಿರುದ್ಧ ಸೆಣಸಾಡಿದರು. ತೀವ್ರ ಪ್ರತಿರೋಧ ಮತ್ತು ಪೈಪೋಟಿ ಏರ್ಪಟ್ಟಿತು. ಪಟ್ಟಾಧಿಕಾರದ ಕಾರ್ಯ ಸುಗಮಗೊಳಿಸಲು ಚುನಾವಣೆ ಜರುಗಿತು. ಅತೀ ಹೆಚ್ಚು ಮತಗಳನ್ನು ಪಡೆದು ಜಯದೇವ ಸ್ವಾಮಿಗಳು ಭಕ್ತರೊಂದಿಗೆ ವಿಜಯೋತ್ಸವ ಆಚರಿಸಿದ್ದರು. ಅದೇ ವರ್ಷ ಪೀಠಾಧಿಪತಿಯಾಗಿ ನೇಮಕವಾಗಿದ್ದರು.

ಸದಾಚಾರ ಸದ್ಭಕ್ತಿಯಿಲ್ಲದವರ ನೊಲ್ಲನಯ್ಯಾ,
ಅವರಾರಾಧನೆ ದಂಡ/
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನೊಲ್ಲ
ಕೂಡಲ ಸಂಗಮದೇವ, ಭೂಭಾರಕರ/

ನೈಜ ಭಕ್ತಿ, ಶುದ್ಧ ಸದಾಚಾರ ಇಲ್ಲದೆ ಗೈಯುವ ಆಚಾರ, ವಿಚಾರಗಳು ವ್ಯರ್ಥ. ನಿತ್ಯ ಮಾಡುವ ಪ್ರಾಯಶ್ಚಿತಗಳೂ ಪಾಪ ನಿವಾರಣೆಗೆ ಕಾರಣವಾಗುವುದಿಲ್ಲ. ಆಂತರಿಕ ಶುದ್ಧಿ ಮತ್ತು ಸತ್ಯ ನಿಷ್ಠತೆ ದೇವರನ್ನು ಒಲಿಸುವ ಸನ್ಮಾರ್ಗವೆಂದು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಅದರಂತೆ ಆ ಚುನಾವಣೆಯಲ್ಲಿ ಅಪಜಯದೊಂದಿಗೆ ಅಪಮಾನ ಅನುಭವಿಸಿದ ಹಾನಗಲ್ಲದ ಕುಮಾರಸ್ವಾಮಿಗಳು, ಬೃಹನ್ಮಠದ ವಿರುದ್ಧ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲು ಆರಂಭಿಸಿದರು. ೧೨ನೆ ಶತಮಾನದಿಂದಲೂ ಅಲ್ಲಮ ಪ್ರಭುಗಳಿಂದ ವಿರಕ್ತ ಪರಂಪರೆ ಹೊಂದಿದ್ದ ಹಾನಗಲ್ಲದ ವಿರಕ್ತ ಮಠವನ್ನು ಬ್ರಾಹ್ಮಣರ ಅಗ್ರಹಾರಗಳಿಗೆ ಸಮನಾಗಿ ಬೆಳೆಸ ತೊಡಗಿದರು. ಕ್ರಮೇಣ ಸಂಸ್ಕೃತ ಪಾಠ ಶಾಲೆಗೆ ಒತ್ತು ನೀಡಿದರು. ವೇದಾಗಮ ಶಾಸ್ತ್ರ ಗಳನ್ನು ಬೋಧಿಸಲು ಒತ್ತಾಯಿಸಿದರು. ಪಂಚಾಚಾರ್ಯರ ಮತ್ತು ಶೈವ ಪರಂಪರೆಗೆ ಜೋತು ಬಿದ್ದರು. ತದನಂತರ ಲಿಂಗಿ ಬ್ರಾಹ್ಮಣರ ಹಾಗೂ ವೀರಶೈವ ಪರಂಪರೆಯನ್ನು ಆಚರಣೆಗೆ ತಂದರು.
ಕ್ರಿ.ಶ. ೧೮೮೬ರಿಂದಲೂ ಮುಂಬೈ ಪ್ರಾಂತ್ಯದ ಶೈಕ್ಷಣಿಕ ಡೈರೆಕ್ಟರ್ ಆಗಿದ್ದ ಬ್ರಿಟಿಷ್ ಮೂಲದ ಲೀ ವಾರ್ನರ್ ಎಂಬ ಅಧಿಕಾರಿಯಿಂದ ಸರ್ಕಾರಿ ಶಾಲೆಗಳಿಗೆ ಕಾಯ್ದಿಟ್ಟ ಮಾಫಿ ಜಾಗಗಳನ್ನು ಎರಡು ಭಾಗಗಳನ್ನಾಗಿಸಿದರು. ಒಂದು ಭಾಗವನ್ನು ಬ್ರಾಹ್ಮಣರ ಅಗ್ರಹಾರಗಳಿಗೆ, ಇನ್ನೊಂದು ಭಾಗವನ್ನು ವೀರಶೈವ ವರ್ಗಕ್ಕೆ ಉಚಿತ ಪ್ರಸಾದ ನಿಲಯ ಹಾಗೂ ವಿದ್ಯಾಭಿವೃದ್ಧಿ ಸಂಸ್ಥೆಗಳಿಗೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸೊನ್ನಲಗಿಯ ವಾರದ ಮಲ್ಲಪ್ಪನವರು, ಒಂಟಮುರಿಯ ರಾಜಾ ಲಖಮನಗೌಡ, ಬಸವಪ್ರಭು ದೇಸಾಯಿ ಅವರುಗಳಿಂದ ೫೦ ಸಾವಿರ ರೂ ದೇಣಿಗೆ ಸಂಗ್ರಹಿಸಿ, ಸಂಸ್ಕೃತ ಮತ್ತು ವೇದಾಧ್ಯಯನಕ್ಕೆ ಬಳಸಿಕೊಂಡರು. ತಮ್ಮ ಮೂಲ ವಿಚಾರಗಳನ್ನು ಯಾರಿಗೂ ಸ್ಪಷ್ಟವಾಗಿ ಹೇಳದೆ-ಕೇಳದೆ, ಲಿಂಗಾಯತ ಮುಖಂಡರುಗಳನ್ನು ಧಾರವಾಡದ ಟೌನ್ ಹಾಲನಲ್ಲಿದ್ದ ಲಿಂಗಾಯತ ಅಭಿವೃದ್ಧಿ ಸಂಸ್ಥೆಯ ಸಭಾ ಭವನದಲ್ಲಿ ಸಭೆ ಕರೆದು, ೧೯೦೪ ರಲ್ಲಿ ಲಿಂಗಾಯತ ಧರ್ಮದ ವಿರುದ್ಧವಾಗಿ “ವೀರಶೈವ ಮಹಾಸಭಾ” ಸ್ಥಾಪಿಸಲು ಕಾರಣರಾದರು.

ಇಬ್ಬರು ಮೂವರು ದೇವರೆಂದು
ಉಬ್ಬುಬ್ಬಿ ಮಾತನಾಡಬೇಡ, ದೇವನೊಬ್ಬನೆ ಕಾಣಿರೋ,
ಇಬ್ಬರೆಂಬುದು ಹುಸಿ ನೋಡಾ/
ಕೂಡಲ ಸಂಗಮ ದೇವನಲ್ಲದೆ ಇಲ್ಲವೆಂದಿತ್ತು ವೇದ/

ಬಹು ದೇವೋಪಾಸನೆಯಿಂದ ಹಲವು ದೇವರನ್ನು ನಂಬುವುದು ವ್ಯರ್ಥ. ಹಾಗೆಂದು ವಾದಿಸಬೇಡ. ದೇವನೊಬ್ಬನೆ, ಆದರೆ ಆತನ ನಾಮ ಹಾಗೂ ರೂಪಗಳು ಹಲವು. ಅದನ್ನು ಅರಿಯಬೇಕು. ಕೂಡಲಸಂಗಮದೇವನಲ್ಲದೆ ಅನ್ಯ ದೇವರು ಇಲ್ಲವೆಂದು ಸ್ವತಃ ವೇದಗಳೆ ಸಾರುತ್ತವೆ ಎಂದು ಬಸವಣ್ಣನವರು ಪ್ರತಿಪಾದಿಸಿದ್ದನ್ನು ಅಲ್ಲಗಳೆದು, ೧೯೦೯ರಲ್ಲಿ ಐತಿಹಾಸಿಕ ಬದಾಮಿ ಹತ್ತಿರ ಶಿವಯೋಗ ಮಂದಿರ ಸ್ಥಾಪಿಸಿದರು. ಅದರಲ್ಲಿ ಕೇವಲ ಜಂಗಮ ವಟುಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಿದರು. ಕ್ರಮೇಣ ಜಂಗಮ ಕುಲದವರೆ ಗುರುವಿನ ಸ್ಥಾನ ವಹಿಸಿಕೊಳ್ಳುವಂತೆ ನೋಡಿಕೊಂಡರು. ಪಂಚಪೀಠಗಳೊಂದಿಗೆ ಕೈ ಜೋಡಿಸಿದರು. ಲಿಂಗಾಯತ ಧರ್ಮ ಪಾಲಿಸುತ್ತಿದ್ದ ಮಠಗಳಲ್ಲಿ ಒತ್ತಾಯದಿಂದ ಲಿಂಗಿ ಬ್ರಾಹ್ಮಣ, ವೀರಶೈವ, ವೈದಿಕ ಸಂಸ್ಕೃತಿ ಬೆಳೆಸಲು ವ್ಯವಸ್ಥಿತ ಕಾರ್ಯಯೋಜನೆ ಹಮ್ಮಿಕೊಂಡರು. ಅವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಹಗಲಿರುಳು ಶ್ರಮಿಸಿದರು. ಬಸವ ತತ್ವ ಹಾಗೂ ಶರಣ ಧರ್ಮದ ವಿರುದ್ಧವಾಗಿ ಸನಾತನಿಗಳ ಮೌಡ್ಯಗಳನ್ನು ಹೆಚ್ಚು ಪ್ರಚಾರಗೊಳಿಸಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲೂ ಸಂಸ್ಕೃತ ಪಾಠ ಶಾಲೆ ಆರಂಭಿಸಲು ಮುತುವರ್ಜಿ ವಹಿಸಿದರು. ಅಂದಿನ ಗುರುವರ್ಯರಾಗಿದ್ದ ಉದ್ಧಾನ ಶಿವಯೋಗಿಗಳ ಮೇಲೆ ಒತ್ತಡ ಹೇರಿ, ಸಂಸ್ಕೃತ ವಿದ್ಯಾಲಯ ಆರಂಭಿಸಿದರು. ೧೯೩೦ರಿಂದ ನಾಡಿನ ಒಳಗೆ ಮತ್ತು ಹೊರಗೆ ಸಂಚರಿಸಿದರು. ಸಂಸ್ಕೃತ ಕಲಿಸುವ ಶಾಖಾ ಮಠಗಳನ್ನು ಆರಂಭಿಸಿ, ವೈದಿಕ ಸಂಸ್ಕೃತಿ ಬೆಳೆಸಿ, ಮನೆ ಮಾತಾಗಿಸಿದರು.

ದೇಶ ದೇಶಾಂತರವ ತಿರುಗಿ, ತೊಳಲಿ ಬಳಲಿ
ಕೆಲರ ಹಳಿದು, ಕೆಲರ ಹೊಗಳಿ
ವ್ಯಥಾ ಹೋಯಿತ್ತೆನ್ನ ಸಂಸಾರ/
ಗಿರಿಯ ಶಿಖರದ ಮೇಲೆ ಲಿಂಗ ಧ್ಯಾನದಲ್ಲಿ ಮೌನಿಯಾಗಿರಿಸು ಸಕಳೇಶ್ವರಾ/

ಲೋಕ ಸಂಚಾರ ಗೈದು ಕೆಲವರನ್ನು ತೆಗಳಿ, ಮತ್ತೆ ಕೆಲವರನ್ನು ಹೊಗಳಿ ಸ್ವಾರ್ಥ ಮತ್ತು ಸೇಡಿನ ಕಾರ್ಯ ಸಾಧಿಸುವುದು ವ್ಯರ್ಥ. ಅದರ ಬದಲಾಗಿ ಗಿರಿ ಶಿಖರಗಳ ಮೇಲಿದ್ದು ಲಿಂಗ ಧ್ಯಾನದಲ್ಲಿ ನಿರತನಾದಡೆ ಪರಮಾತ್ಮನ ಸಾಮಿಪ್ಯ ಸಾಧಿಸಬಹುದೆಂದು ಸಕಲೇಶ ಮಾದರಸರ ಪ್ರತಿಪಾದನೆಯಂತೆ ನಡೆದುಕೊಂಡಿದ್ದರೆ ಹಾನಗಲ್ಲ ಕುಮಾರಸ್ವಾಮಿಗಳ ಸಾದಕ ಬದುಕು ಸಾರ್ಥಕವಾಗುತ್ತಿತ್ತು. ಯಾಕೆಂದರೆ, ಕೊಲ್ಹಾಪುರದ ಶಾಹು ಮಹಾರಾಜರು ಲಿಂಗಾಯತ ಧರ್ಮ ಧೀಕ್ಷೆ ಸ್ವೀಕರಿಸಲು ಮುಂದಾದಾಗ, ಬೇಡವೆಂದು ಪ್ರತಿರೋಧಿಸಿದವರೆ ಹಾನಗಲ್ಲದ ಕುಮಾರ ಸ್ವಾಮಿಗಳು. ಅಂದು ಶಾಹು ಮಹಾರಾಜರು ಲಿಂಗಾಯತ ಧೀಕ್ಷೆ ಪಡೆದಿದ್ರೆ, ಇಂದು ಮಹಾರಾಷ್ಟçದಲ್ಲಿರುವ ಎಲ್ಲಾ ಜಂಗಮರು ಲಿಂಗಾಯತರಾಗಿ ಉಳಿಯುತ್ತಿದ್ದರು.


ಡಾ. ಸತೀಶ ಕೆ.ಇಟಗಿ, ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ-೫೮೬೧೨೯ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email: satishtagi10@gmail.com

Latest articles

More like this