HomeUncategorizedಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

Published on

ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ೧೨ ಕಿ.ಮೀ. ದೂರದಲ್ಲಿ ಇರುವ ಕಮ್ಮಸಂದ್ರ ಗ್ರಾಮವು ಕೋಟಿಲಿಂಗಗಳ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರಕ್ಕೆ ಹೋಗಿಬರೋಣವೆಂದು ಮಡದಿ ಬಹಳ ದಿನಗಳಿಂದಲೂ ಹೇಳುತ್ತಿದ್ದಳು. ಅವಳ ಆಸೆ ಈಡೇರುವ ದಿನ ಮೊನ್ನೆ ಬಂತು. ನಾವು ಹಾಸನದಿಂದ ಬೆಂಗಳೂರಿಗೆ ತೆರಳಿ ಅಲ್ಲಿ ರಾತ್ರಿ ಮಗನ ಮನೆಯಲ್ಲಿ ಉಳಿದೆವು. ಬೆಳಿಗ್ಗೆ ಸ್ನಾನ ಮಾಡಿ ತಿಂಡಿ ತಿಂದು ಕೋಲಾರದ ಬಸ್ಸು ಹಿಡಿಯಲು ನಾಗರಬಾವಿಯಿಂದ ಹೊರಟೆವು. ನಮ್ಮ ಜೊತೆಗೆ ನನ್ನ ಮಡದಿಯ ಅಕ್ಕನವರು ಸೇರಿಕೊಂಡರು. ಕೋಲಾರದಲ್ಲಿ ಇಳಿದು ಬಂಗಾರಪೇಟೆ ಬಸ್ಸು ಹತ್ತಿ ಕಮ್ಮಸಂದ್ರ ಗ್ರಾಮ ತಲುಪುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗಿತ್ತು. ಮನೆಯಿಂದ ಬುತ್ತಿ ಏನೂ ತೆಗೆದುಕೊಂಡು ಹೋಗಿರಲಿಲ್ಲ. ಬಸ್ ಇಳಿದ ಗ್ರಾಮದಿಂದ ದೇವಾಲಯಕ್ಕೆ ಅರ್ಧ ಕಿ.ಮೀ. ದೂರ. ದಾರಿ ಮಧ್ಯೆ ಒಂದು ಹೋಟೆಲ್ ಸಿಕ್ಕಿತು. ಅಲ್ಲಿ ಬಿಸಿಬಿಸಿ ಅನ್ನಸಾಂಬರ್ ಊಟ ಮಾಡಿ ಮುಂದೆ ದೇವಸ್ಥಾನದತ್ತ ಹೊರಟೆವು. ದೇವಸ್ಥಾನ ಪ್ರವೇಶಕ್ಕೆ ೨೦ ರೂ. ಟಿಕೇಟ್ ಪಡೆಯಬೇಕಿತ್ತು. ಪಡೆದು ಒಳ ಪ್ರವೇಶಿಸಿದವು.

ಕಮ್ಮಸಂದ್ರದವು ೧೦೮ ಅಡಿಗಳ ಎತ್ತರದ ಬೃಹತ್ ಶಿವಲಿಂಗ ಮತ್ತು ೩೨ ಅಡಿ ಎತ್ತರದ ದೊಡ್ಡ ನಂದಿಯಿಂದ ತುಂಬಾ ಪ್ರಸಿದ್ಧಿಯಾಗಿದೆ. ಶ್ರೀ ಸಾಂಬಶಿವಮೂರ್ತಿ ಸ್ವಾಮಿಗಳು ೧೯೮೦ರಲ್ಲಿ ಮೊದಲು ಲಿಂಗವನ್ನು ಸ್ಥಾಪಿಸಿ ಅಂದಿನಿಂದ ಇಂದಿನವರೆಗೆ ಈ ದೇವಾಲಯದ ಆವರಣದಲ್ಲಿ ಶಿವಲಿಂಗ ಸ್ಥಾಪನೆ ನಿರಂತರವಾಗಿ ನಡೆದಿದೆ. ಈ ದೇಗುಲದ ಯೋಜನೆಯು ಒಂದು ಕೋಟಿ ಲಿಂಗಗಳ ಸ್ಥಾಪನೆಯ ಧ್ಯೇಯೋದ್ದೇಶ ಹೊಂದಿದೆ. ಆದ್ದರಿಂದ ಇದನ್ನು ಕೋಟಿಲಿಂಗೇಶ್ವರ ಎಂದು ಹೆಸರಿಸಲಾಗಿದೆ.

ಈ ದೇಗುಲದಲ್ಲಿ ಭಕ್ತರು ಲಿಂಗಗಳನ್ನು ಸ್ಥಾಪಿಸುವ ಮೂಲಕ ವಿಶೇಷ ಪೂಜೆಗಳನ್ನು ಸಲ್ಲಿಸಬಹುದು. ಈಗಾಗಲೇ ತೊಂಬತ್ತು ಲಕ್ಷ ಲಿಂಗಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳುತ್ತಾರೆ.

ವಿಶಾಲ ಪ್ರಾಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು ೨ನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳು ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳು ಕಣ್ಣು ಹಾಯಿಸಿದಷ್ಟು ಲೆಕ್ಕ ಎಣಿಸಲು ಸುಸ್ತಾಗುವಷ್ಟು ಕಾಣುತ್ತವೆ.

ದೇವಾಲಯದ ಪ್ರಾಂಗಣ ಪ್ರವೇಶಿಸಿದ ಬಳಿಕ ಪ್ರಧಾನ ಶಿವದೇವಾಲಯ, ಬ್ರಹ್ಮ ವಿಷ್ಣು ಮಹೇಶ್ವರ, ವಿನಾಯಕ, ಅಯ್ಯಪ್ಪ, ಆಂಜನೇಯ. ಕನ್ನಿಕಾ ಪರಮೇಶ್ವರಿ, ಪಾರ್ವತಿ ಲಕ್ಷ್ಮಿ, ನವಗ್ರಹ, ಸತ್ಯನಾರಾಯಣಸ್ವಾಮಿ ಸುಬ್ರಹ್ಮಣ್ಯ, ವೆಂಕಟೇಶ್ವರ ಪಂಚಮುಖಿ ಆಂಜನೇಯ ಹೀಗೆ ಕೆಲವು ದೇವಸ್ಥಾನಗಳಿವೆ. ಗಣೇಶ ದೇವಾಲಯದ ಎದುರು ಬಿಲ್ವಪತ್ರೆ ಮರ ಹಾಗೂ ನಾಗಲಿಂಗ ವೃಕ್ಷಗಳಿವೆ. ದೇಗುಲದ ಆವರಣದಲ್ಲಿ ಭಕ್ತರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಧ್ಯಾನ ಮಂದಿರವಿದೆ. ಪ್ರತಿವರ್ಷ ದಸರೆಯ ಸಂದರ್ಭ ಇಲ್ಲಿ ರಥೋತ್ಸವ ಜಾತ್ರೆ ನಡೆಯುತ್ತದೆ. ನಾವು ದೇಗುಲ ದರ್ಶನ ಮಾಡಿ ನಾಲ್ಕಕ್ಕೆ ಹೊರಬಂದು ಮೂರ‍್ನಾಲ್ಕು ಬಸ್ಸು ಹತ್ತಿ ಇಳಿದು ಬೆಂಗಳೂರಿನ ಮಗನ ಮನೆ ತಲುಪಿದಾಗ ರಾತ್ರಿ ಎಂಟಾಗಿತ್ತು.


ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

Latest articles

More like this