ಬಾದಾಮಿ: “ಉತ್ತಮ ಸಾಧನೆಗೆ ಭವಿಷ್ಯದಲ್ಲಿ ಉತ್ತಮ ಗುರಿ ಇಟ್ಟುಕೊಳ್ಳಬೇಕು. ಅಧ್ಯಯನ ಮಾಡುವಾಗ ಏಕಾಗ್ರತೆ ಎಷ್ಟು ಅವಶ್ಯವೋ, ಕ್ರೀಡೆಯಲ್ಲಿಯೂ ಅಷ್ಟೇ ಏಕಾಗ್ರತೆ ಮತ್ತು ತಾಳ್ಮೆ ಇರಬೇಕು” ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಬಾದಾಮಿಯ ಹೇಮರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವವಿದ್ಯಾಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಚದುರಂಗ (ಚೆಸ್) ಸ್ಪರ್ಧೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ವಿ.ವಿ.ಯ ದೈಹಿಕ ಶಿಕ್ಷಣ ಸಂಯೋಜಕ ಕೆ.ಎಸ್. ಶಿರಹಟ್ಟಿ ಮಾತನಾಡಿ, “ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಶಿಸ್ತು ಮತ್ತು ಸಾಧನೆಯ ಗುರಿಯನ್ನು ಹೊಂದಿರಬೇಕು” ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಹುನಗುಂದ ಎಸ್.ಆರ್. ವಸ್ತ್ರದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಬಿ. ಚಳಗೇರಿ ಮಾತನಾಡಿ, “ಚದುರಂಗ ಸ್ಪರ್ಧೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಗೆಲ್ಲುವ ಸಾಮರ್ಥ್ಯವಿದೆ. ವಿದ್ಯಾರ್ಥಿಗಳು ಛಲದಿಂದ ಗೆಲುವನ್ನು ಸಾಧಿಸಬೇಕು” ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪಾಟೀಲ ಶಿವಾನಂದ ರಾಯನಗೌಡರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಂಚನಮಾಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಪದವಿ ಕಾಲೇಜುಗಳಿಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಚದುರಂಗ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.