ದಾಸ ವಿಜಯ ಸಮ್ಮಿಲನ ನಿರ್ವಾಹಕ ತಂಡ ಹಾಗೂ ಎಸ್.ವಿ.ಬಿ.ಸಿ – 3 ಕನ್ನಡ ಇವರ ಸಂಯುಕ್ತಾಶ್ರಯದಲ್ಲಿ, ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಗುರುಗಳ ಕೃಪಾಶೀರ್ವಾದದೊಂದಿಗೆ ‘ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ’ ಲಗ್ಗೆರೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಮಠದಲ್ಲಿ (ಶ್ರೀ ರಾಘವೇಂದ್ರ, ಶ್ರೀ ಸತ್ಯಬೋಧ ಗುರುಗಳ ಸನ್ನಿಧಾನ) ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಸಂತ ಕವಿತ (ಮಾಜಿ ಬೋರ್ಡ್ ಸದಸ್ಯರು, ಎಸ್ ವಿ ಬಿ ಸಿ – ಟಿಟಿಡಿ ಹಾಗೂ ಕರ್ನಾಟಕ ಲೋಕಲ್ ಅಡ್ವೈಸರಿ ಕೌನ್ಸಿಲ್ ಸದಸ್ಯರು) ಮತ್ತು ಶ್ರೀಯುತ ಶ್ಯಾಮಸುಂದರ್ (ಕಾರ್ಯದರ್ಶಿಗಳು, ಶ್ರೀ ಮಠ ಲಗ್ಗೆರೆ) ಪಾಲ್ಗೊಂಡು ಮಾತನಾಡಿ , “ಹರಿದಾಸ ಸಾಹಿತ್ಯ ಮತ್ತು ಶ್ರೀ ವಿಜಯದಾಸರ ಕೀರ್ತನೆಗಳು ಸಮಾಜದಲ್ಲಿ ಭಕ್ತಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಆರಾಧನಾ ಮಹೋತ್ಸವಗಳು ಮುಂದಿನ ಪೀಳಿಗೆಗೆ ದಾಸ ಪರಂಪರೆಯನ್ನು ಪರಿಚಯಿಸಲು ಅತ್ಯಂತ ಪೂರಕವಾಗಿವೆ” ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಸಿ. ಆರ್. ಮುರಳಿ (ಖ್ಯಾತ ಲೆಕ್ಕ ಪರಿಶೋಧಕರು ಮತ್ತು ಹರಿದಾಸ ಪೋಷಕರು), ಡಾ. ವಾಸುದೇವ ಅಗ್ನಿಹೋತ್ರಿ (ವಿಶ್ರಾಂತ ಪ್ರಾಧ್ಯಾಪಕರು, ಅಧ್ಯಕ್ಷರು – ದಾಸಧೇನು ಟ್ರಸ್ಟ್), ಡಾ. ಭುಜಂಗರಾವ್ (ಸಂಚಾಲಕರು, ಹಿಂದೂ ಧರ್ಮ ಪ್ರಚಾರ ಪರಿಷತ್, ಟಿಟಿಡಿ ಬೆಂಗಳೂರು), ಡಾ. ವಾದಿರಾಜ್ (ಸಹಾಯಕ ಪ್ರಾಧ್ಯಾಪಕರು, ವಿಜಯ ಕಾಲೇಜು) ಹಾಗೂ ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಕಾರ್ಯನಿರ್ವಾಹಕರು, ಪ್ರಣವ ಮೀಡಿಯಾ ಹೌಸ್) ಅವರಿಗೆ ಪ್ರತಿಷ್ಠಿತ ‘ಪುರುಷೋತ್ತಮ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ದಾಸನಮನ ನಿರ್ವಾಹಕ ತಂಡ ಮತ್ತು ದಾಸವಿಜಯ ಸಮ್ಮಿಲನ ಸದಸ್ಯರಿಂದ ಶ್ರೀ ವಿಜಯದಾಸರ ಕೃತಿಗಳ ಸಮೂಹ ಗಾಯನ, ಕೋಲಾಟ, ಸಮೂಹ ನೃತ್ಯ, ಹರಿವಾಣಸೇವೆ ಕಾರ್ಯಕ್ರಮದಲ್ಲಿ ಶ್ರೀಮತಿ ರಾಜಶ್ರೀ, ನಾಗೇಂದ್ರ ಸಿಂಹ, ಗುಂಡೂರಾವ್, ಶ್ರೀಮತಿ ಪದ್ಮ ಎಸ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ ಸೇರಿದಂತೆ ನೂರಾರುಭಕ್ತರು ಉಪಸ್ಥಿತರಿದ್ದರು.