ಸಿಂದಗಿ: ಹೊನ್ನಳ್ಳಿ ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು, ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲ್ಲದೆ ಹೋದಲ್ಲಿ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಹೊನ್ನಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಶಿಲ್ದಾರ ಕರೆಪ್ಪ ಬೆಳ್ಳಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಬಸವರಾಜ ರಂಜಣಗಿ, ಗೋಲಗೇರಿ ವಲಯದ ಉಪಾಧ್ಯಕ್ಷ ಅಂಬರೀಶ ಡಿಗ್ಗಿ, ಮಾತನಾಡಿ ಸ್ವತಂತ್ರ ಬಂದು ಎಂಟು ದಶಕಗಳು ಕಳೆದರೂ ಕೂಡ ಸಿಂದಗಿ ತಾಲೂಕಿನ ಕಟ್ಟ ಕಡೆಯ ಹಳ್ಳಿಗಳಾದ ಹೊನ್ನಳ್ಳಿ, ಬ್ರಹ್ಮದೇವನಮಡು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೊಂದಿವೆ. ಮುಖ್ಯವಾಗಿ ಆಸ್ಪತ್ರೆಯ ಕೊರತೆ ಇದ್ದು, ಹಳ್ಳಿಗಳ ಜನರಿಗೆ ಬಹಳ ತೊಂದರೆ ಇದೆ. ರೋಗ ರುಜಿನಗಳಿಗೆ ತೊಂದರೆಯಾದರೆ ದೂರದ ಗೋಲಗೇರಿ, ಸಿಂದಗಿ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ. ರಸ್ತೆಗಳು ಸರಿಯಿಲ್ಲ ಹಾಗೂ ದೂರದ ಊರುಗಳಿಗೆ ತೆರಳಲು ಬಡ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಕಾರಣ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಹೊನ್ನಳ್ಳಿ ರೈತ ಘಟಕದ ಅಧ್ಯಕ್ಕ ಸಂತೋಷ ಶಿರಸಿಗಿ ಮಾತನಾಡಿ, ಕೂಡಲೇ ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು. ಇಲ್ಲದೆ ಹೋದಲ್ಲಿ ಮುಂದೆ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಏಕನಾಥ ದಾಶ್ಯಾಳ, ಪರಶು ದೊಡಮನಿ, ರಮೇಶ್ ಕುದುರಗೊಂಡ, ಮುಖೇಶ ಬಡಿಗೇರ, ಬಸವರಾಜ ಕಟ್ಟಿಮನಿ, ಗೋಲಗೇರಿ ವಲಯ ಅಧ್ಯಕ್ಷ ಶಬ್ಬೀರ್ ನಾಯ್ಕೋಡಿ, ಹೊನ್ನಳ್ಳಿ ಗ್ರಾಮ ಘಟಕ ಅಧ್ಯಕ್ಷ ಸಂತೋಷ ಶಿರಸಿಗಿ, ಉಪಾಧ್ಯಕ್ಷ ಖಾದರ್ ಭಾಷಾ ಉಸ್ತಾದ, ರಾಜಶೇಖರ ಖ್ಯಾಡ, ಭೀಮರಾಯ ಕ್ಯಾದಿಗೇರಿ, ಪ್ರದೀಪ, ರಮೇಶ್ ತಿಪನಟಗಿ , ಅಣ್ಣಪ್ಪ ತಿಪನಟಗಿ, ರಾಜು ಕಂಬಾರ, ಹಣಮಂತ ಛಲವಾದಿ, ರೇವಣಸಿದ್ಧ ರತ್ಯಾಳ, ಆನಂದ ಕೂಡಗಿ, ರಮೇಶ್ ಬಮ್ಮನಳ್ಳಿ, ರಾಜಶೇಖರ ಶಿರಸಗಿ, ನಬಿರಸೂಲ್ ಬಾಗೇವಾಡಿ, ಭೀಮು ಛಲವಾದಿ, ಬಾಗಣ್ಣ ಅಲ್ಲಾಪೂರ ಇದ್ದರು.