ಸಿಂದಗಿ; ಇದೇ ೨೧ ಹಾಗೂ ೨೨ರಂದು ಸಿಂದಗಿ ಪಟ್ಟಣದಲ್ಲಿ ಜರುಗಲಿರುವ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮೆಲ್ಲರ ಅಕ್ಷರಜಾತ್ರೆಯಾಗಿದೆ ನಾವೆಲ್ಲರೂ ಸೇರಿ ಅತ್ಯಂತ ಕನ್ನಡದ ಬಗ್ಗೆ ಅಭಿಮಾನ ಗೌರವ ಇಟ್ಟುಕೊಂಡು ಹಬ್ಬದಂತೆ ಆಚರಿಸುವುದು ಕರ್ತವ್ಯ ಮತ್ತು ಧರ್ಮವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.
ಇದೇ ೨೧ ಹಾಗೂ ೨೨ರಂದು ಜರುಗಲಿರುವ ವಿಜಯಪುರ ಜಿಲ್ಲೆಯ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಬಾವಿ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ನಾಡು-ನುಡಿ, ನೆಲ, ಜಲ, ಭಾಷೆ ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸುತ್ತವೆ. ಇಡೀ ನಾಡಿಗೆ ಮಾನವ ಕುಲಕ್ಕೆ ಕೊಟ್ಟ ಹಿರಿಯರ ಸಂದೇಶವನ್ನು ಈ ಸಾಹಿತ್ಯ ಸಮ್ಮೇಳನದ ಮೂಲಕ ಜನರಿಗೆ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಿಲ್ಲೆಯ ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಶಿಕ್ಷಣ ತಜ್ಞರು, ಸಾಹಿತ್ಯಾಸಕ್ತರು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಲರವಕ್ಕೆ ಸಿಂದಗಿ ಪಟ್ಟಣ ಸಂಪೂರ್ಣ ಸಜ್ಜಾಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ೧೫ ವರ್ಷಗಳ ನಂತರ ಮತ್ತೇ ಸಿಂದಗಿ ಪಟ್ಟಣದಲ್ಲಿ ಈ ಬಾರಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನ ಅತ್ಯಂತ ವಿಶಿಷ್ಟ ವಾಗಿ ಜರುಗಲಿದ್ದು, ೨೧ ಜುಲೈ ಎರಡು ಸಾವಿರ ಮಹಿಳೆಯರಿಂದ ಕುಂಬಮೇಳ ಹಾಗೂ ಕವಿಗಳು. ೨೨ ಜುಲೈ ರಂದು ಭಾವೈಕ್ಯತೆಯ ಪ್ರತೀಕವಾಗಿ ಎರಡು ಸಾವಿರ ಮಹಿಳೆಯರಿಂದ ಬುತ್ತಿ ಜಾತ್ರೆ ಹಾಗೂ ಎತ್ತಿನ ಬಂಡಿಗಳ ಮೇಲೆ ಜ್ಞಾನಪೀಠ ಪುರಸ್ಕೃತರು.ರಾಷ್ಟ್ರದ ಮಹಾಪುರುಷರ ಭಾವಚಿತ್ರದ ಮೇರವಣಿಗೆ ನಡೆಯುವದು. ಕನ್ನಡ ವಿಜಯಪುರ ಜಿಲ್ಲೆಯ ೨೧ನೇ ಸಾಹಿತ್ಯ ಸಮ್ಮೇಳನಕ್ಕೆ ಎಚ್.ಜಿ ಕಾಲೇಜು ಮೈದಾನದಲ್ಲಿ ಮದುವಣ ಗಿತ್ತಿಯಂತೆ ಸಕಲ ಸಿದ್ದತೆ ಮಾಡಿಕೊಂಡು ಬೃಹತ್ ವೇದಿಕೆ ಸಜ್ಜಾಗಿದ್ದು ನಾವೆಲ್ಲರೂ ಸೇರಿ ಈ ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಲಹೆಗಾರ ಅಶೋಕ ಗಾಯಕವಾಡ, ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ತಾಲೂಕಾಧ್ಯಕ್ಷ ವೈ.ಸಿ.ಮಯೂರ, ಮಲ್ಲಣ್ಣ ಸಾಲಿ, ಲಿಂಬೆ ಅಭಿವೃದ್ಧಿ ಮಂಡಳೀ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ಸುನಂದಾ ಯಂಪೂರೆ, ಶೈನಾಬಿ ಮಸಳಿ, ವರ್ಷಾ ಪಾಟೀಲ, ಶಾರದಾ ಬೆಟಗೇರಿ ಸೇರಿದಂತೆ ಅನೇಕರಿದ್ದರು.