ಮೂಡಲಗಿ – ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದ ಅರಬಾಂವಿ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) 2026’ರ ಕಾರ್ಯದಲ್ಲಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಮೂಡಲಗಿ ತಹಸೀಲ್ದಾರ ಕಾರ್ಯಾಲಯದಲ್ಲಿ ಶನಿವಾರದಂದು ಸಹಾಯಕ ಮತದಾರ ನೊಂದಣಾಧಿಕಾರಿಗಳು ಹಾಗೂ ತಹಸೀಲ್ದಾರ ಶ್ರೀಶೈಲ ಗುಡಮೆ ಅವರು ಸನ್ಮಾನಿಸಿ ಗೌರವಿಸಿದರು.
ಅತ್ಯುತ್ತಮ ಸೇವೆ ಸಲ್ಲಿಸಿದ ಅರಭಾವಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 58ರ ಮತಗಟ್ಟೆ ಅಧಿಕಾರಿ (BLO) ಪ್ರಕಾಶ ಮೋರೆ ಅವರಿಗೆ ಚುನಾವಣಾ ಆಯೋಗದ ಪ್ರಶಂಸನಾ ಪತ್ರವನ್ನು ತಹಶೀಲ್ದಾರ್ ಶ್ರೀಶೈಲ ಗುಡಮೆ ಪ್ರದಾನ ಮಾಡಿದರು. ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ನಿಖರ ಮಾಹಿತಿ ಸಂಗ್ರಹಿಸುವ ಸವಾಲಿನ ಕೆಲಸವನ್ನು ಅತ್ಯಂತ ತಾಳ್ಮೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿ, ನಿಗದಿತ ಸಮಯದೊಳಗೆ ಶೇ. 100 ರಷ್ಟು ನಿಖರವಾಗಿ ಕಾರ್ಯ ಪೂರ್ಣಗೊಳಿಸಿದ ಅವರ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿ ಈ ಗೌರವ ಸಮರ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಎಸ್.ಎ. ಬಬಲಿ, ತಾಲೂಕು ಶಿರಸ್ತೇದಾರ ಶ್ರೀಕಾಂತ್ ಮಾಯನ್ನವರ, ಅರಭಾವಿ ಕಂದಾಯ ನಿರೀಕ್ಷಕರಾದ ಸುರೇಶ ತುಪ್ಪದ, ಬಿಎಲ್ಒ ಸೇರಿದಂತೆ ಕಚೇರಿಯ ಸಿಬ್ಬಂದಿಗಳಿದ್ದರು. ಪ್ರಕಾಶ ಮೋರೆ ಅವರ ಕಾರ್ಯದಕ್ಷತೆ ಇತರ ಸಿಬ್ಬಂದಿಗೂ ಮಾದರಿಯಾಗಿದೆ ಎಂದು ಅಧಿಕಾರಿಗಳು ಈ ವೇಳೆ ಪ್ರಶಂಸಿದರು.
– ಮುರಿಗೆಪ್ಪ ಮಾಲಗಾರ