Homeಸುದ್ದಿಗಳುಸಾಧನೆಗೆ ಉತ್ತಮ ಗುರಿ ಹಾಗೂ ಏಕಾಗ್ರತೆ ಅವಶ್ಯ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ಸಾಧನೆಗೆ ಉತ್ತಮ ಗುರಿ ಹಾಗೂ ಏಕಾಗ್ರತೆ ಅವಶ್ಯ: ಶಾಸಕ ಭೀಮಸೇನ ಚಿಮ್ಮನಕಟ್ಟಿ

Published on

​ಬಾದಾಮಿ: “ಉತ್ತಮ ಸಾಧನೆಗೆ ಭವಿಷ್ಯದಲ್ಲಿ ಉತ್ತಮ ಗುರಿ ಇಟ್ಟುಕೊಳ್ಳಬೇಕು. ಅಧ್ಯಯನ ಮಾಡುವಾಗ ಏಕಾಗ್ರತೆ ಎಷ್ಟು ಅವಶ್ಯವೋ, ಕ್ರೀಡೆಯಲ್ಲಿಯೂ ಅಷ್ಟೇ ಏಕಾಗ್ರತೆ ಮತ್ತು ತಾಳ್ಮೆ ಇರಬೇಕು” ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

​ಬಾದಾಮಿಯ ಹೇಮರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವವಿದ್ಯಾಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಚದುರಂಗ (ಚೆಸ್) ಸ್ಪರ್ಧೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಕಾರ್ಯಕ್ರಮದಲ್ಲಿ ಬಾಗಲಕೋಟೆ ವಿ.ವಿ.ಯ ದೈಹಿಕ ಶಿಕ್ಷಣ ಸಂಯೋಜಕ ಕೆ.ಎಸ್. ಶಿರಹಟ್ಟಿ ಮಾತನಾಡಿ, “ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಶಿಸ್ತು ಮತ್ತು ಸಾಧನೆಯ ಗುರಿಯನ್ನು ಹೊಂದಿರಬೇಕು” ಎಂದರು.

​ಅತಿಥಿಯಾಗಿ ಭಾಗವಹಿಸಿದ್ದ ಹುನಗುಂದ ಎಸ್.ಆರ್. ವಸ್ತ್ರದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಬಿ. ಚಳಗೇರಿ ಮಾತನಾಡಿ, “ಚದುರಂಗ ಸ್ಪರ್ಧೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಗೆಲ್ಲುವ ಸಾಮರ್ಥ್ಯವಿದೆ. ವಿದ್ಯಾರ್ಥಿಗಳು ಛಲದಿಂದ ಗೆಲುವನ್ನು ಸಾಧಿಸಬೇಕು” ಎಂದು ಸಲಹೆ ನೀಡಿದರು.

​ಕಾಲೇಜಿನ ಪ್ರಾಚಾರ್ಯ ಪಾಟೀಲ ಶಿವಾನಂದ ರಾಯನಗೌಡರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಂಚನಮಾಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

​ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಪದವಿ ಕಾಲೇಜುಗಳಿಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಚದುರಂಗ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

Latest articles

More like this