Homeಕವನಕವನ : ಹೂವಿನ ಇರಿತ

ಕವನ : ಹೂವಿನ ಇರಿತ

Published on

ಹೂವಿನ ಇರಿತ

​ದರ್ಪದಿ ಗಹಗಹಿಸಿ
ಗರ್ಜಿಸಿದವನ ಬಳಿ ಚೂರಿಯಿರಲಾರದು,
ಆದರೆ ಕೂಡಿ ಆಡಿದವನ
ನಕ್ಕ ಸೊಕ್ಕಿನ ನಗು ಮೊಗದಲ್ಲಿ
ಬೆನ್ನಿಗಿರಿಯುವ ಕುತಂತ್ರವಿದ್ದೀತು.

​ದ್ವೇಷದಿ ಮಾತಾಡುವವನ ಬಳಿ ಮಾತ್ರ ವೈರವಿಲ್ಲ,
ಪ್ರೀತಿ-ಮಮತೆ ತೋರುವವರಲ್ಲೂ
ಒಳಮುನಿಸು, ಮತ್ಸರದ ಕುಟಿಲತೆಯಿದೆ.

​ಸುಳ್ಳ-ಕಳ್ಳನ ಬಳಿ ಮಾತ್ರ
ನಿತ್ಯದ ಒಳಸಂಚಿರದು,
ಸಾವಿನಾಚೆಗೆ ತಲುಪಿದರೂ
ಸತ್ಯವಂತರ ನಿಜರೂಪ ಬಯಲಾಗದು.

​ಎಳೆಯ ಮುಳ್ಳು ಚುಚ್ಚಿದರೆ
ಹೆಚ್ಚು ನೋವೆನಿಸದು,
ಆದರೆ ಅರಳಿದ ಮೃದು ಹೂವೇ
ಹೃದಯ ಇರಿದರೆ
ಬಾಳ ಪಯಣವೇ ಮುಗಿದುಹೋಗುವುದು.

​ಕರಿ ಗಿರಿಯ ನೆರಳಿನಲಿ
ಭಯವಷ್ಟೇ ಇರಬಹುದು,
ಹಸಿರು ಹಂದರದ ಅಡಿಯಲ್ಲಿ
ಹಾವಿನ ಸುಳಿವಿರಬಹುದು;
ಕತ್ತಲೆಯ ಹಾದಿಗಿಂತಲೂ
ನಂಬಿದ ನಂದಾದೀಪವೇ
ಕಣ್ಣು ಕುರುಡು ಮಾಡುವುದು.
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Latest articles

More like this