Homeಲೇಖನಹೊಸಅಗ್ರಹಾರ ಕೆರೆಯಲ್ಲಿ ಪಕ್ಷಿಗಳ ವೀಕ್ಷಣೆ

ಹೊಸಅಗ್ರಹಾರ ಕೆರೆಯಲ್ಲಿ ಪಕ್ಷಿಗಳ ವೀಕ್ಷಣೆ

Published on

ಶುಕ್ರವಾರ ರಾತ್ರಿ ಎಂಟು ಗಂಟೆ. ಪೋನ್ ರಿಂಗಣಿಸಿತು. ಅದು ಬಿ.ಎಸ್.ದೇಸಾಯಿ ನಂಬರ್. ಗುರುವೇ, ನಾಳೆ ಬೆಳಿಗ್ಗೆ ೫ಕ್ಕೆ ನಾವು ಹೊಸಅಗ್ರಹಾರಕ್ಕೆ ಹೊರಟ್ಟಿದ್ದೇವೆ. ನೀವು ಬನ್ನಿ ಎಂದರು. ಏನ್ ಸಾರ್ ಸಮಾಚಾರ ಎಂದೆ. ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಹಾಸನ ಪಕ್ಷಿ ವೀಕ್ಷಕರ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಾವೆಲ್ಲಾ ಸೇರಿ ಕೆ.ಆರ್.ನಗರ ತಾ. ಹೊಸಅಗ್ರಹಾರ ಕೆರೆಗೆ ಭೇಟಿ ನೀಡಿ ಅಲ್ಲಿ ಬೆಳಗಿನ ಪಕ್ಷಿವೀಕ್ಷಣೆ ಇದೆ ಎಂದರು. ನಿಮ್ಮ ಗೆಳೆಯರು ಬರುವುದಾದರೆ ಕೇಳಿ ಎಂದರು. ಪ್ರೊ.ಎ.ಹೆಚ್.ಗಣೇಶ್ ಅಂಕಪುರ ಅವರಿಗೆ ಕೇಳಿದೆ. ಅವರು ಬೇರೆ ಕಡೆ ಹೊರಟಿದ್ದರು. ನಾನೊಬ್ಬನೇ ಶನಿವಾರ ಬೆಳಿಗ್ಗೆ ಐದಕ್ಕೆ ಹಾಸನ ಎನ್.ಆರ್. ಸರ್ಕಲ್‌ಗೆ ಹೋದೆ. ದೇಸಾಯಿ ಕಳಿಸಿದ್ದ ನವಿನ್ ಸಾರ್ ನಂಬರ್‌ಗೆ ಪೋನ್ ಮಾಡಿದೆ. ಈಗ ಮನೆ ಬಿಟ್ಟೆ. ಅಲ್ಲೇ ಇರಿ ಬಂದೆ ಎಂದರು. ಬಂದರು. ಹೈಕೋರ್ಟ್ ಮುಂದೆ ಕಾರದಕಟ್ಟಿ ಹತ್ತಿದರು.

ಮುಂದೆ ಹೊಳೆನರಸೀಪುರದಲ್ಲಿ ದೇಸಾಯಿ ಕಾರಿನಲ್ಲಿ ಬಂದ ಮಂದಿ ಸೇರಿ ೯ ಜನ ಹೊಳೆನರಸೀಪುರದಲ್ಲಿ ಕಾಫಿ ಕುಡಿದೆವು. ಅಲ್ಲಿ ಪತ್ರಕರ್ತರು ಸುರೇಶ್ ಕುಮಾರ್ ಜೊತೆಯಾದರು. ಹೆಮ್ಮಿಗೆ ಮೋಹನ್, ಪತ್ರಕರ್ತರು ಉದಯಕುಮಾರ, ನಟ ಭಾರತೀಶ, ಇಂಜಿನಿಯರ್ ಸುಬ್ಬಸ್ವಾಮಿ, ಉಪನ್ಯಾಸಕ ಬಿ.ಎಸ್.ರವಿಕುಮಾರ, ಚನ್ನರಾಯಪಟ್ಟಣ ಪ್ರಭಾಕರ ಶೋಭ ದಂಪತಿಗಳು, ಯೋಗಾನಂದ, ವಿಶ್ವನಾಥ, ಗಿರೀಶ, ಕತೆಗಾರ ಕೆ.ಪಿ. ಸತ್ಯನಾರಾಯಣ.. ಹೀಗೆ ಪರಿಸರಪ್ರಿಯರು ಕೆರೆ ಏರಿ ಮೇಲೆ ಕುಳಿತು ಕೆಲಹೊತ್ತು ಪಕ್ಷಿ ವೀಕ್ಷಿಸಿದೆವು. ಹುಳು ಹುಪ್ಪಟೆ ತಿನ್ನುತ್ತಿದ್ದ ಪಕ್ಷಿಗಳನ್ನು ಪೋಟೋಶೂಟ್ ಮಾಡಿದರು. ಕೆರೆ ಏರಿಮೇಲೆ ಬ್ಯಾನರ್ ಕಟ್ಟಿ ಕಾರಿನಲ್ಲಿ ತಂದ ಫೋಲ್ಡೆಡ್ ಚೇರ್ ಹಾಕಿ ನಾವು ಪ್ರೇಕ್ಷಕರು ಕುಳಿತೆವು.

ಪಕ್ಷಿ ಪರಿಸರ ಕುರಿತು ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಹೆಮ್ಮಿಗೆ ಮೋಹನ್ ಮಾತನಾಡಿದರು. ವಿದೇಶಗಳ ಶೀತಪೀಡಿತ ಪ್ರದೇಶದಲ್ಲಿ ನೆಲೆಸಿರುವ ನೂರಾರು ಬಗೆಯ ಪಕ್ಷಿಗಳು ೩೦ ಸಾವಿರದಿಂದ ೪೦ ಸಾವಿರ ಕಿ.ಮೀ. ಹಾರಿ ಭಾರತದತ್ತ ಬಂದು ವಿವಿಧ ಪಕ್ಷಿಧಾಮದಲ್ಲಿ ನೆಲಸುತ್ತವೆ. ೬ ತಿಂಗಳ ನಂತರ ಮತ್ತೆ ತಮ್ಮ ದೇಶಗಳಿಗೆ ಹಾರಿಹೋಗುತ್ತವೆ. ಪಕ್ಷಿಗಳು ಸಾಮಾನ್ಯ ಅತಿ ಕಡಿಮೆ ನೀರಿರುವ ಕೆರೆಗಳಲ್ಲಿ ಇಳಿದು ಕೆರೆಯ ಸಣ್ಣಮೀನುಗಳನ್ನು ಹೆಕ್ಕಿ ತಿನ್ನುತ್ತವೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಹತ್ತಾರು ದೇಶಗಳ ಪಕ್ಷಿಗಳು ಬರುತ್ತವೆ. ಮುಂದಿನ ನಮ್ಮ ಕ್ಯಾಂಪ್ ಅಲ್ಲಿಗೆ ಎಂದರು. ಇದಕ್ಕೂ ಮೊದಲು ಸಸ್ಯಶಾಸ್ತ್ರ ಉಪನ್ಯಾಸಕ ರವಿಕುಮಾರ್‌ಗೆ ಪಕ್ಷಿಗಳ ಹೆಸರು ಕೇಳಿದೆ. ಪಾಂಡ್ ಹೇರಾನ್ (ಗದ್ದೆ ಗುಮ್ಮ), ಕ್ಯಾಟಲ್ ಎಗ್ರೇಟ್ (ಬೆಳ್ಳಕ್ಕಿ), ಗ್ರೇ ಪೆಲಿಕನ್ (ನೀರ್‌ಗೋಳಿ), ವೈಟ್ ನೆಕ್ಡ್ ಸ್ಟೊಕ್, ಫೈಂಟೆಡ್ ಸ್ಟೋಕ್, ಓಪನ್ ಬಿಲ್ಲೆಡ್ ಸ್ಟೊಕ್, ಲಿಟಲ್ ಇಗ್ರೇಟ್.. ಹೀಗೆ ಪಕ್ಷಿಗಳನ್ನು ಹೆಸರಿಸಿ ಕ್ಯಾಮರದಲ್ಲಿ ತೋರಿಸಿದರು. ಈ ರವಿ, ಹಾಸನದ ಹುಣಸಿನಕರೆ, ಮಾಕನಕೆರೆ ಸೇರಿದಂತೆ ೪ ಕೆರೆಗಳ ನೀರಿನ ಪರಿಶೀಲನೆ ನಡೆಸಿದ ಅಧ್ಯಯನಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ನಾನು (ಗೊರೂರು ಅನಂತರಾಜು) ನವಸಾಕ್ಷರರಿಗಾಗಿ ಬರೆದ ಕೆರೆ ಸಂರಕ್ಷಣೆ ಪುಸ್ತಕದಲ್ಲಿ ಇದು ದಾಖಲಾಗಿದೆ. ಇದೇ ಸಂದರ್ಭ ಬಿ.ಎಸ್.ದೇಸಾಯಿ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದು ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.

ಇತ್ತ ಹೊಸ ಅಗ್ರಹಾರ ಕೆರೆಯಲ್ಲಿ ಮೀನುಗಳನ್ನು ಹರಿಗೋಲಿನಲ್ಲಿ ಹೊತ್ತು ತಂದ ಇಬ್ಬರು ಮೀನುಗಾರರು ತುಂಬಿದ ಚೀಲದಲ್ಲಿ ಹೇರಿಕೊಂಡು ಏರಿ ಮೇಲೆ ಬಂದರು. ಅದನ್ನು ತೂಕ ಹಾಕಿ ಹೋಲ್‌ಸೇಲ್ ಮಾರಾಟ ನಡೆಯಿತು. ಕೆರೆಯ ನೀರಿನಲ್ಲಿ ಸಾವಿರಾರು ಪಕ್ಷಿಗಳು ಗುಂಪಾಗಿ ಚಲಿಸುತ್ತಿದ್ದರೆ ಕುರುಕ್ಷೇತ್ರ ಯುದ್ಧದಲ್ಲಿ (ಗ್ರಾಫಿಕ್) ಸೈನಿಕರು ಬರುತ್ತಿರುವಂತೆ ಚಿಕ್ಕದಾಗಿ ಗೋಚರಿಸಿತು. ಮೀನುಗಾರರು ಕೆಲವು ಸತ್ತ ಮೀನುಗಳನ್ನು ಕೆರೆಯ ಅಂಗಳದಲ್ಲಿ ಬಿಸಾಡಿದರು. ದೊಡ್ಡ ಪಕ್ಷಿಗಳು ಅವುಗಳನ್ನು ಅಲ್ಲೇ ಮೂರ‍್ನಾಲ್ಕು ಸುತ್ತು ಹೊಡೆದು ಎತ್ತಿಕೊಂಡು ಹೋದೆವು. ಕೆಲವು ಅಡಿಕೆ ತೋಟದ ಮರಗಳ ಮೇಲೆ ಬಂದು ಕುಳಿತವು. ತೋಟ ಯಾರದೆಂದು ಒಬ್ಬ ಮಹನೀಯರನ್ನು ಕೇಳಿದೆ. ಇದು ಬ್ರಾಹ್ಮಣರದು ಎಂದರು. ಊರಿಗೆ ಹೊಸ ಅಗ್ರಹಾರ ಹೆಸರು ಇದ್ದಿದ್ದರಿಂದ ಕುತೂಹಲದಿಂದ ಕೇಳಿದೆ ಅವರು ಎಷ್ಟು ಒಕ್ಕಲು ಇದ್ದಾರೆ.

ಸಾರ್, ಹಿಂದೆ ತುಂಬಾ ಕುಟುಂಬ ಇತ್ತು. ಈಗ ಎಲ್ಲಾ ಬೆಂಗಳೂರು, ಮೈಸೂರು ಸೇರಿದ್ದಾರೆ. ಊರು ಜಾತ್ರೆಗೆ ಬರುತ್ತಾರೆ ಎಂದರು. ನಾವು ಕೆರೆಗೆ ಬಂದ ಹಾದಿಯಲ್ಲಿ ಮುಖ್ಯ ರಸ್ತೆ ಬದಿ ಅರಳಿಕಟ್ಟೆ ಇತ್ತು. ಅದನ್ನು ನೋಡಿ ನನಗೆ ನಮ್ಮೂರಿನ ಅರಳಿಕಟ್ಟೆ ಅದರ ಪಕ್ಕದ ಗ್ರಾಮದೇವತೆ ಮಾರಮ್ಮನ ಗುಡಿ ನೆನಪಾಯಿತು. ನಿಮ್ಮೂರಿನಲ್ಲಿ ಗ್ರಾಮದೇವತೆ ದೇವಸ್ಥಾನ ಇದೆಯೇ ಎಂದೆ. ಹೂಂ..ಸಾರ್, ಪಟಾಲದಮ್ಮನ ಜಾತ್ರೆ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುತ್ತೆ ಎಂದರು. ಒಂದು ಸಾರಿ ಜಾತ್ರೆಗೆ ಬಂದು ಊರಿನ ಬಗ್ಗೆ ಮತ್ತೆ ಬರೆಯಬೇಕೆನಿಸಿತು.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

Latest articles

More like this