ನಾವು -ನಮ್ಮವರು
ಶ್ರೀಮತಿ ಶೈಲಜಾ ಭಿoಗೆಯವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಆಜೀವ ಸದಸ್ಯರು ಮತ್ತು ಬೆಳಗಾವಿಯ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕರು.
ಬೆಳಗಾವಿಯಲ್ಲಿರುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ
ಧೈರ್ಯ ತುಂಬಿ,ಪ್ರೋತ್ಸಾಹ ನೀಡಿ, ಪ್ರೀತಿ ಮತ್ತು ವಿಶ್ವಾಸದಿಂದ ಮುಂದೆ ಬರುವಂತೆ ಮಾಡಿ, ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುವಂತೆ ಮಾಡಿರುವ ಒಬ್ಬ ಆದರ್ಶ ಮಹಿಳೆ ಎಂದು ಹೇಳಬಹುದು.
ಶೈಲಕ್ಕ ಅವರು 1952 ಮೇ 26ರಂದು ಬೆಳಗಾವಿಯಲ್ಲಿ ಜನಿಸಿದರು.ಇಲ್ಲಿಯೇ ಪ್ರಾರ್ಥಮಿಕ,ಮಾಧ್ಯಮಿಕ ಶಿಕ್ಷಣ ಮುಗಿಸಿ ಆರ್. ಎಲ್ ಎಸ್ ಕಾಲೇಜಿನಲ್ಲಿ ಕಲಿತು ಬಿ ಎಸ್ ಸಿ ಪದವೀಧರೆಯಾದರು. 1980 ರಿಂದ ಸಮಾಜಸೇವೆ ಆಧ್ಯಾತ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ, 1984ರಲ್ಲಿ ಬೆಳಗಾವಿಯ ಶ್ರೀ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಇಡೀ ಕರ್ನಾಟಕದಲ್ಲಿಯೇ ಪ್ರಥಮ ಮಹಿಳಾ ನಿರ್ದೇಶಕಿಯಾಗಿ ನೇಮಕಗೊಂಡರು. 1994ರಲ್ಲಿ ಕರ್ನಾಟಕದಲ್ಲಿಯೇ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದರು. ನಾಗನೂರು ಶ್ರೀಮಠದ ಮಹಿಳಾ ವಸತಿ ನಿಲಯದಲ್ಲಿ ಕಾರ್ಯನಿರತ ಮಹಿಳಾ ವಸತಿ ನಿಲಯದಲ್ಲಿ ಕಳೆದ 30 ವರ್ಷಗಳಿಂದ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಿಂಗರಾಜು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಲೈನ್ಸ್ ಕ್ಲಬ್ ಆಫ್ ಸಹೇಲಿಯ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯಕ್ಕೆ ಉತ್ತಮ ಅಧ್ಯಕ್ಷೆ ಎಂಬ ಪ್ರಶಸ್ತಿ ಪಡೆದಿದ್ದಾರೆ. ಬೆಳಗಾವಿಯ ವಿಜ್ಞಾನ ಕೇಂದ್ರದಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಸಹಭಾಗಿತ್ವ ವಹಿಸಿದ್ದಾರೆ.
ಮಹಿಳಾ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಲಯನ್ಸ್ ಕ್ಲಬ್ ಮಹಿಳಾ ಕಲ್ಯಾಣ ಸಂಸ್ಥೆ, ಮಾನಿನಿ ಸೇವಾ ಸಂಸ್ಥೆ ಹೀಗೆ ಅನೇಕ ಸಾಮಾಜಿಕ ಸಂಸ್ಥೆಗಳ ಮೂಲಕ ದೀನದಲಿತರ ,ಅಂಧ ಮಕ್ಕಳ ಶಾಲೆ,ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಚಾಚುವ ನಿಜವಾದ ಸಮಾಜ ಸೇವಕಿ.
ಶೈಲಕ್ಕ ಅವರು ಚತುರ್ಭಾಷಾ ಪ್ರವೀಣೆ.ಕನ್ನಡ,ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಮಾತಾಡಬಲ್ಲರು.ಉತ್ತಮ ನಿರೂಪಕಿ,ವಾಗ್ಮಿ,ಗಾಯಕಿ, ಲೇಖಕಿ, ಅಭಿನೇತ್ರಿ ಮತ್ತು ಪಾಕ ಪ್ರವೀಣೆ. ಸುಮಾರು 80 ಅಂಕಣ ಬರಹಗಳು ಲೋಕದರ್ಶನ ಪತ್ರಿಕೆಯಲ್ಲಿ ಪ್ರಕಟಣೆಗೊಂಡಿವೆ.
ಅವರು 1995ರಲ್ಲಿ ಲಿಂಗಾಯತ ಮಹಿಳಾ ಸಮಾಜದ ಸ್ಥಾಪನೆ ಮಾಡಿದರು.600ಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿದ ಲಿಂಗಾಯತ ಮಹಿಳಾ ಸಮಾಜವನ್ನು 31 ವರ್ಷಗಳವರೆಗೆ ಸುಸೂತ್ರವಾಗಿ ನಡೆಸಿಕೊಂಡು ಬಂದ ಧನ್ಯತೆ ಇವರಿಗಿದೆ.
ಅವರು ಈಸಕ್ಕಿ ಆಸೆ ನಾಟಕದಲ್ಲಿ ಅಕ್ಕನಾಗಲಾಂಬಿಕೆ ಪಾತ್ರಕ್ಕೆ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಇಳೆಯ ಬೆಳಕು, ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಸೋಬಾನದ ಶಿವ ಬಸಮ್ಮನ ಪಾತ್ರ ಸಹ ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಶೈಲಕ್ಕ ಅವರು ಕನ್ನಡ ಸಾಹಿತ್ಯ ಪರಿಷತ್ತು, ಕೆ.ಎಲ್.ಇ ಸಂಸ್ಥೆ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಕರ್ನಾಟಕ ಲೇಖಕಿಯರ ಸಂಘ, ರಂಗ ಸೃಷ್ಟಿ ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷೆ, ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದ ಸದಸ್ಯೆಯಾಗಿ ಸಹ ಕ್ರಿಯಾಶೀಲರಾಗಿದ್ದಾರೆ. 46 ವರ್ಷಗಳವರೆಗೆ ನಿರಂತರ ಅವಿರತ ಸಮಾಜ ಸೇವೆ ಮಾಡಿದ ಇವರಿಗೆ ನಾನು ಧನ್ಯೋಸ್ಮಿ.
ಅವರು ಎಲ್ಲ ಮಹಿಳೆಯರಿಗೆ ವೈಚಾರಿಕವಾಗಿ, ಧಾರ್ಮಿಕವಾಗಿ, ಚಿಂತನ ಮಂಥನ ನಡೆಸಲು ಅನುಕೂಲಕರ ವಾತಾವರಣ ಕಲ್ಪಿಸಿಕೊಟ್ಟಿದ್ದು ಅಭಿಮಾನದ ಸಂಗತಿ. ಮಹಿಳೆಯರ ಅಸ್ಮಿತೆ ಯನ್ನು ಕಾಪಾಡಿಕೊಳ್ಳಲು ಮಾರ್ಗದರ್ಶನ ನೀಡಿ ಅವರ ಉನ್ನತಿಗಾಗಿ ಹಗಲಿರಲು ಶ್ರಮಿಸುತ್ತಿರುವವರು. ಎಂದಿಗೂ ಪ್ರಸಿದ್ಧಿ ಹಾಗೂ ಕೀರ್ತಿಯ ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ.ಇವರ ಸೇವೆ ನೋಡಿ ಪ್ರಶಸ್ತಿಗಳು ಅವರಿಗೆ ತಾವಾಗಿಯೇ ಲಭಿಸಿವೆ.
ಶೈಲಕ್ಕ ಅವರಿಗೆ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉತ್ತಮ ಸಮಾಜ ಸೇವಕಿ ಪ್ರಶಸ್ತಿ, ಸಹಕಾರಿ ಕ್ಷೇತ್ರದಿಂದ ಅತ್ಯುತ್ತಮ ಸಹಕಾರಿ ಪ್ರಶಸ್ತಿ, ಸಿರಿಗನ್ನಡ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಜೀವಮಾನದ ಸಾಧನೆಗಾಗಿ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೀವಮಾನದ ಸಾಧನೆಗಾಗಿ ಪ್ರಶಸ್ತಿ, ಇತ್ತೀಚೆಗೆ ಮಹಿಳಾ ಒಕ್ಕೂಟದಿಂದ ಧಾರರಿಣಿ ಪ್ರಶಸ್ತಿಗಳು ಲಭಿಸಿವೆ.
ಅಖಿಲ ಭಾರತ ವೀರಶೈವ ಮಹಾಸಭೆಗೆ ಶೈಲಕ್ಕ ಅವರ ಹಿರಿಯ ಸಹೋದರರಾದ ವಿ.ಎಸ್.ಭಾಗಿಯವರು ಅಹೋನಿಶಿ ಅಹೋರಾತ್ರಿ ತನು ಮನ ಧನ ಧಾರೆ ಎರೆದಿದ್ದಾರೆ.ಅದು ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ಜೊತೆ ಶೈಲಕ್ಕ ಕೂಡ ಡಾ. ಆರ್ ಸಿ ಹಿರೇಮಠ ಅವರ ಉಪನ್ಯಾಸ ಕೇಳಲು ಹೋಗುತ್ತಿದ್ದರು. ವಧು-ವರ ಅನ್ವೇಷಣಾ ಕೇಂದ್ರದಲ್ಲಿ ಶೈಲಕ್ಕ ಅವರು ಕೂಡ ಬಸಲಿಂಗಮ್ಮ ಬಾಳೆಕುಂದ್ರಿ ತಮ್ಮಅತ್ತಿಗೆ ವೀಣಾ ಬಾಗಿ ಮತ್ತು ಶ್ರೀಮತಿ ಪ್ರೇಮಾದೇವಿ ಹಿರೇಮಠ ಅವರು ಜೊತೆಗೆ ಸಂಸ್ಥಾಪಕ ಸದಸ್ಯರು ಆಗಿದ್ದರು. ಆಗ ಶ್ರೀ ಭೋಜ ಮತ್ತು ಮುಗಳಿ ಅಜ್ಜನವರು ಇವರಿಗೆ ಸಹಕಾರ ನೀಡುತ್ತಿದ್ದರು. ಈಗಿನ ಬನಿಯಾನ್ ಸ್ಕೂಲ್ನಲ್ಲಿ ಒಂದು ಕೋಣೆಯಲ್ಲಿ ಅವರು ಸಭೆ ನಡೆಸುತ್ತಿದ್ದರು . ಆನಂತರ ಸಮಾದೇವಿ ಗಲ್ಲಿಗೆ ಕಚೇರಿಯನ್ನು ಸ್ಥಳಾಂತರಿಸಲಾಯಿತು. ನಂತರ ಲಿಂಗಾಯತ ಭವನದಲ್ಲಿ ಕಾರ್ಯಕ್ರಮ ನಡೆಸಲು ಪ್ರಾರಂಭ ಮಾಡಿದರು.ಶ್ರೀ ಬಾಲಚಂದ್ರ ಬಾಗಿಯವರು ಇತ್ತೀಚಿಗಷ್ಟೇ ಸೇರ್ಪಡೆಯಾಗಿದ್ದಾರೆ, ಎಂದು ನೆನಪು ಮಾಡಿಕೊಂಡು ಅತ್ಯಂತ ಹೆಮ್ಮೆಯಿಂದ ತಮ್ಮ ಮನೆತನದ ಬಗೆಗೆ ಹೇಳುತ್ತಾರೆ.
ಅವರ ಮಗಳು ಅಶ್ವಿನಿ ಉತ್ತಮ ಗಾಯಕಿ. ಮಗ ಅಮೋದ ರಾಜ್ ದುಬೈಯಲ್ಲಿ ಕಳೆದ 20 ವರ್ಷಗಳಿಂದ ಇಂಜಿನಿಯರ್ ಆಗಿ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ.
ಶೈಲಕ್ಕ ಅವರು ವಿ.ಎಸ್ ಬಾಗಿಯವರ ನಿಧನದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅವರ ತಂದೆಯವರ ಹೆಸರಿನಲ್ಲಿರುವ ದತ್ತಿನಿಧಿ ಕಾರ್ಯಕ್ರಮವನ್ನು ಕೂಡ ಅನೇಕ ವರ್ಷಗಳವರೆಗೆ ನಡೆಸಿಕೊಂಡು ಬಂಡಿದ್ದಾರೆ. ಹೀಗೆ ಸುಮಾರು 45 ವರ್ಷಗಳವರೆಗೆ ನಿರಂತರವಾಗಿ ಎಷ್ಟೇ ಅಡೆತಡೆ ಬಂದರೂ ಅವರು ಸಾಮಾಜಿಕ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ರೀತಿ ಈಗ ಲಿಂಗಾಯತ ಮಹಿಳಾ ಸಮಾಜದಲ್ಲಿ ಒಳಪಂಗಡ ಮತ್ತು ಯಾವುದೇ ರೀತಿಯ ಭೇದಭಾವವಿಲ್ಲದೆ ನಡೆಸಿಕೊಂಡು ಬಂದಿದ್ದೇವೆ, ಎಲ್ಲ ಧರ್ಮದವರನ್ನು ಅತಿಥಿಗಳಾಗಿ ಕರೆದಿದ್ದೇವೆ ಮತ್ತು ಧರ್ಮ ಜಾಗೃತಿಗಾಗಿ ಸಮಾಜಮುಖಿಯಾಗಿ ಸಹಾಯ ನೀಡಲು ಲಿಂಗಾಯತ ಮಹಿಳಾ ಸಮಾಜ ಯಾವಾಗಲೂ ಒಂದು ಹೆಜ್ಜೆ ಮುಂದೆ ಎಂದು ಹೇಳಿಕೊಳ್ಳಲು ಅಭಿಮಾನವೆನಿಸುತ್ತದೆ ಎಂದು ಹೆಮ್ಮೆಯಿಂದ ಶೈಲಕ್ಕ ಅವರು ಹೇಳುತ್ತಾರೆ. ಅವರ 75 ನೆಯ ವರ್ಷದ ಹುಟ್ಟುಹಬ್ಬದ ದಿವಸ ಈ ಲೇಖನ ಮೂಡಿ ಬರುತ್ತಿರುವುದು ಅತ್ಯಂತ ಸಾರ್ಥಕತೆಯ ವಿಚಾರ.
ಅತ್ಯಂತ ಆತ್ಮೀಯರು, ಸ್ನೇಹಪರಜೀವಿ, ನಿಗರ್ವಿ, ಮಾನವೀಯ ಕಳಕಳಿಯುಳ್ಳವರು, ಎಲ್ಲರಿಗೂ ತಾಯಿಯ ಸಮಾನರಾದ ಶೈಲಕ್ಕ ಭಿoಗೆ ಅವರ ಜೀವನದ ಪ್ರಮುಖವಾದ ಘಟ್ಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ನಿಜವಾಗಲೂ ಖುಷಿ ಕೊಡುವಂತಹುದು.
ಸುಧಾ ಪಾಟೀಲ
ವಿಶ್ವಸ್ಥರು ( Trustee)
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ