Homeಸುದ್ದಿಗಳುವಿದ್ಯಾರ್ಥಿಗಳ ಸತ್ಕೀರ್ತಿಯೇ ಗುರುಗಳಿಗೆ ನಿಜವಾದ ಗುರುದಕ್ಷಿಣೆ: ಪ್ರಾಚಾರ್ಯ ಡಾ. ಸುರೇಶ ಹನಗಂಡಿ

ವಿದ್ಯಾರ್ಥಿಗಳ ಸತ್ಕೀರ್ತಿಯೇ ಗುರುಗಳಿಗೆ ನಿಜವಾದ ಗುರುದಕ್ಷಿಣೆ: ಪ್ರಾಚಾರ್ಯ ಡಾ. ಸುರೇಶ ಹನಗಂಡಿ

Published on

ಮೂಡಲಗಿ: ವರ್ಷಗಳು ಉರುಳಿದರೂ ಶಿಕ್ಷಕರ ಮೇಲಿನ ಗೌರವವನ್ನು ಹಾಗೇ ಉಳಿಸಿಕೊಂಡು ಬಂದು, ಇವತ್ತು ಗುರುವಂದನೆ ಸಲ್ಲಿಸಿರುವುದು ಶ್ಲಾಘನೀಯ ಕಾರ್ಯ. ವಿದ್ಯಾರ್ಥಿಗಳ ಯಶಸ್ಸು ಮತ್ತು ಸಮಾಜದಲ್ಲಿ ಅವರು ಗಳಿಸುವ ಸತ್ಕೀರ್ತಿಯೇ ಶಿಕ್ಷಕರಿಗೆ ಸಿಗುವ ಅತಿ ದೊಡ್ಡ ಗುರುದಕ್ಷಿಣೆ ಎಂದು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ನುಡಿದರು.

​ಗುರುವಾರ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

​ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲೆಯ ದಿನಗಳು ಅತ್ಯಂತ ಪ್ರಮುಖವಾದ ಘಟ್ಟ. ಅಂದು ಗುರುಗಳು ಬಿತ್ತಿದ ಜ್ಞಾನದ ಬೀಜ ಇಂದು ಸಮಾಜದಲ್ಲಿ ದೊಡ್ಡ ವೃಕ್ಷವಾಗಿ ಬೆಳೆದು ನಿಂತಿದೆ. ಹಳೆಯ ವಿದ್ಯಾರ್ಥಿಗಳು ತಾವು ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ, ತಮಗೆ ಅಕ್ಷರ ಕಲಿಸಿದ ಶಾಲೆ ಮತ್ತು ಊರನ್ನು ಮರೆಯದೆ ಇಂತಹ ಸಮ್ಮಿಲನ ಆಯೋಜಿಸಿರುವುದು ಅವರ ಕೃತಜ್ಞತಾ ಭಾವವನ್ನು ಎತ್ತಿ ತೋರಿಸುತ್ತದೆ ಎಂದರು.

​ಶಿಕ್ಷಕ ಆರ್.ಪಿ. ಬಾಗೋಜಿ ಮಾತನಾಡಿ, ನಮ್ಮನ್ನು ನೆನಪಿಟ್ಟುಕೊಂಡು ಈ ರೀತಿ ಸತ್ಕರಿಸಿದ ನಿಮ್ಮೆಲ್ಲರ ಪ್ರೀತಿ ಮನಸ್ಸಿಗೆ ತುಂಬ ಖುಷಿ ನೀಡಿದೆ. ನಿಮ್ಮೆಲ್ಲರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

​ಶಿಕ್ಷಕಿ ಎಂ.ಎ. ಹೂಗಾರ ಮಾತನಾಡಿ, ಅಂದು ತರಗತಿಯಲ್ಲಿ ನಿಮ್ಮನ್ನು ಗದರಿದಾಗ, ಬೈದಾಗ ನಿಮ್ಮ ಒಳಿತಿಗಾಗಿಯೇ ಆ ರೀತಿ ಮಾಡಿದ್ದೆವು ಎಂಬುದನ್ನು ನೀವು ಮರೆಯದೇ, ಇವತ್ತು ಅದೇ ಗುರುಗಳನ್ನು ಪ್ರೀತಿಯಿಂದ ಕರೆದು ಸನ್ಮಾನಿಸಿ ಗೌರವಿಸಿದ್ದೀರಿ. ನಿಮ್ಮ ಈ ಭಾವನೆ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಆರ್. ಇ. ಸಂಸ್ಥೆಯ ಚೇರಮನ್ ಆದ  ಬಸಗೌಡ ಶಿ. ಪಾಟೀಲ ಅವರು ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಮತ್ತು ಸಂಸ್ಕಾರ ನೀಡಿದ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಹಳೆಯ ವಿದ್ಯಾರ್ಥಿಗಳ ಈ ಒಗ್ಗಟ್ಟು ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

​ಸುಮಾರು ಎರಡು ದಶಕಗಳ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು ಮತ್ತು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವಪೂರ್ವಕವಾಗಿ ನಮಿಸಿದರು.

​ಕಾರ್ಯಕ್ರಮದಲ್ಲಿ ಶಾಲೆಯ ಅಂದಿನ ಹಾಗೂ ಇಂದಿನ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಾದ ಆರ್. ಪಿ. ಬಾಗೋಜಿ, ಎ. ಬಿ. ಉಪ್ಪಿನ, ಶ್ರೀಮತಿ ಎಂ. ಎ. ಹೂಗಾರ, ಶ್ರೀಮತಿ ಎಂ. ಎಂ. ಮಡಿವಾಳರ, ಆರ್. ಪಿ. ಕಂಬಾರ, ದೈಹಿಕ ಶಿಕ್ಷಕ ಬಿ. ಎಂ. ಡಬ್ಬನವರ ಮತ್ತು ಸಿಪಾಯಿ ಎಚ್. ಎಸ್. ನಿರ್ಲಿ ಅವರನ್ನು ಹಳೆಯ ವಿದ್ಯಾರ್ಥಿ ವೃಂದದವರು ಪ್ರೀತಿಪೂರ್ವಕವಾಗಿ ಸತ್ಕರಿಸಿ, ಆಶೀರ್ವಾದ ಪಡೆದರು.

​ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಆರ್. ಪಾಟೀಲ, ಹಳೆ ವಿದ್ಯಾರ್ಥಿಗಳಾದ ಶಿವಾನಂದ ಕಮತಿ, ಶ್ರೀಧರ ಪಾಲಬಾಂವಿ, ವಿಠ್ಠಲ ಹುದ್ದಾರ, ಮಂಜುನಾಥ ಗೊರಗುದ್ದಿ, ರುಕ್ಮಿಣಿ ಅಮ್ಮಣಗಿ, ಉಮಾ ಪೂಜಾರಿ, ಮಂಜುಳಾ ಅರಬಾಂವಿ, ಮಹೇಶ ಹೊಸಮನಿ, ಬಸವರಾಜ ನಬಾಪೂರ, ಹನಮಂತ ವಡೇರ, ದುಂಡಪ್ಪಾ ಚೌಗಲಾ, ನಿಂಗಪ್ಪ ನೇಸರ್ಗಿ, ಸವಿತಾ ಚೌಗಲಾ, ಶೋಭಾ ಖನಗಾಂವಿ, ಶೈಲಾ ಕಮತ ಮುಂತಾದವರು ಉಪಸ್ಥಿತರಿದ್ದರು.

​ಸಾವಿತ್ರಿ ಕೋಳಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರಮೇಶ ಹೆಬ್ಬಾಳ ಸ್ವಾಗತಿಸಿದರು. ಶಿವಾನಂದ ಕಡಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಡಿ.ಎಸ್. ಹುಗ್ಗಿ ನಿರೂಪಿಸಿದರು. ಮಾರುತಿ ಮರಡಿ ವಂದಿಸಿದರು.

Latest articles

More like this