ಹಳ್ಳೂರ: ಸನ್ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ದಿನದಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹಳ್ಳೂರ ಕ್ರಾಸ್ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಶಾಲೆಯ ಇತಿಹಾಸದಲ್ಲೇ ಅಭೂತಪೂರ್ವ ಎಂಬಂತೆ, ಶೇಕಡಾ ನೂರಕ್ಕೆ ನೂರರಷ್ಟು (100%) ಮಕ್ಕಳ ಹಾಜರಾತಿಯೊಂದಿಗೆ ಹೊಸ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅತ್ಯಂತ ವಿಶೇಷವಾಗಿ ಚಾಲನೆ ನೀಡಲಾಯಿತು.
ಪುಷ್ಪವೃಷ್ಟಿ, ಹೂಮಾಲೆ ಹಾಕಿ ಸಿಹಿ ನೀಡಿ ವಿದ್ಯಾರ್ಥಿಗಳ ಸ್ವಾಗತ
ಶಾಲೆಯ ಮೊದಲ ದಿನದ ಅಂಗವಾಗಿ ಶಾಲಾ ಸಮುದಾಯದವರು,ಪೋಷಕರು ಹಾಗೂ ಶಿಕ್ಷಕರು ಸೇರಿ ಮಕ್ಕಳಿಗೆ ಅದ್ದೂರಿ ಸ್ವಾಗತ ಕೋರಿದರು. ಶಾಲೆಗೆ ಬಂದ ಪುಟ್ಟ ಕಂದಮ್ಮಗಳಿಗೆ ಗ್ರಾಮಸ್ಥರು ಪುಷ್ಪವೃಷ್ಟಿ ಮಾಡುವ ಮೂಲಕ ಪ್ರೀತಿಯಿಂದ ಬರಮಾಡಿಕೊಂಡರು. ಬಳಿಕ ಮಕ್ಕಳಿಗೆ ಸಿಹಿ ಹಂಚಿ, ಅವರ ಶೈಕ್ಷಣಿಕ ವರ್ಷದ ಯಶಸ್ಸಿಗೆ ಶುಭ ಹಾರೈಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಅಗತ್ಯವಿರುವ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ, ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಹೆಚ್ಚಿಸಲಾಯಿತು.
ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡಮಿ ಇವರಿಂದ 50,000 ಮೌಲ್ಯದ ಕಂಪ್ಯೂಟರ್ ಕೊಡುಗೆಯನ್ನು ಪಡೆಯಲಾಯಿತು.
ತಹಶೀಲ್ದಾರರು ಶಾಲೆಯ ತಾಂತ್ರಿಕ ಹಾಗೂ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ವೈಯಕ್ತಿಕ/ಸೇವಾ ನಿರತ ಕಾಳಜಿಯಿಂದ 50,000 ಬೆಲೆ ಬಾಳುವ ಅತ್ಯಾಧುನಿಕ ಕಂಪ್ಯೂಟರ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
”ಸರ್ಕಾರಿ ಶಾಲೆಯ ಮಕ್ಕಳೂ ಸಹ ಖಾಸಗಿ ಶಾಲೆಗಳ ಜತೆ ಪೈಪೋಟಿ ನಡೆಸುವಂತೆ ಡಿಜಿಟಲ್ ಶಿಕ್ಷಣ ಪಡೆಯಬೇಕು. ಹಳ್ಳೂರ ಕ್ರಾಸ್ ಶಾಲೆಯ ಮಕ್ಕಳ ನೂರಕ್ಕೆ ನೂರರಷ್ಟು ಹಾಜರಾತಿ ಮತ್ತು ಸಮುದಾಯದ ಒಗ್ಗಟ್ಟು ಇತರ ಗ್ರಾಮಗಳಿಗೆ ಮಾದರಿಯಾಗಿದೆ, ಎನ್ನುವ ನಿಟ್ಟಿನಲ್ಲಿ ಶಾಲೆಗೆ ದೇಣಿಗೆ ನೀಡಿದರು.ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲದೆ ಇಡೀ ಹಳ್ಳಿಯ ಸಮುದಾಯ ಕೈಜೋಡಿಸಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಮಕ್ಕಳ ನೂರರಷ್ಟು ಹಾಜರಾತಿ ಹಾಗೂ ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಶಾಲೆಯ ಮೇಲಿರುವ ಸಾರ್ವಜನಿಕರ ವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ.
ಅಂತಿಮವಾಗಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಮಾನ್ಯ ತಹಶೀಲ್ದಾರರಿಗೆ, ದಾನಿಗಳಿಗೆ ಹಾಗೂ ಸಮುದಾಯದ ಮುಖಂಡರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಹಳ್ಳೂರ ಕ್ರಾಸ್ ಸರ್ಕಾರಿ ಶಾಲೆಯ ಇಂದಿನ ಈ ಆರಂಭ, ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರಿದ್ದರು.