Homeಲೇಖನಲೇಖನ : ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ

ಲೇಖನ : ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ

Published on

ಹನ್ನೆರಡನೆಯ ಶತಮಾನದ ಶರಣರ ಚರಿತ್ರೆ ಮತ್ತು ಇತಿಹಾಸ ದಾಖಲಿಸುವ ಸಂದರ್ಭದಲ್ಲಿ ಅವರ ಕಾಲಘಟ್ಟ ಅಣ್ಣ ಅಕ್ಕ ತಂಗಿ ಎನ್ನುವ ತಪ್ಪು ಮಾಹಿತಿ ಇಲ್ಲಿಯವರೆಗೆ. ಸಂಗ್ರಹವಾಗಿವೆ. ಇವತ್ತು ಡಿ ದೇವರಾಜು ಎಂಬ ಖ್ಯಾತ ಕಥಾ ಕೀರ್ತನಕಾರರು ನನಗೆ ಫೋನ್ ಮಾಡಿ ತಮಗೆ ಬಸವಣ್ಣನವರ ಬಗ್ಗೆ ಕೆಲ ವಿಚಾರಗಳ ವಿಷಯಗಳ ಸ್ಪಷ್ಟತೆ ಮತ್ತು ಮಾಹಿತಿ ಬೇಕು ನನಗೆ ತಮ್ಮ ಫೋನ್ ನಂಬರ್ ಪ್ರೊ ಎಸ್ ಜಿ ಸಿದ್ದರಾಮಯ್ಯ ಸರ್ ಕೊಟ್ಟಿದ್ದಾರೆ ಎನ್ನುತ್ತಾ ಬಸವಣ್ಣನವರ ಉಪನಯನ ಬಾಲ್ಯ ಮತ್ತೆ ಕೂಡಲ ಸಂಗಮಕ್ಕೆ ಹೋಗುವ ವಿಷಯಗಳನ್ನು ಚರ್ಚಿಸುತ್ತಾ ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ಕೇಳಿದರು.

ಅದಕ್ಕೆ ನಾನು ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ ಎಂದು ಹೇಳಿದೆ. ಅವರು ಸರ್ ಹಿರಿಯ ಸಂಶೋಧಕ ಎಂ ಚಿದಾನಂದ ಮೂರ್ತಿ ಡಾ ಎಂ ಎಂ ಕಲಬುರ್ಗಿ ಸರ್ ಡಾ ವೀರಣ್ಣ ರಾಜೂರ ಮುಂತಾದ ಸಂಶೋಧಕರು ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ದಾಖಲಿಸಿದ್ದಾರೆ ಎಂದು ವಿನಮ್ರವಾಗಿ ಹೇಳುತ್ತಾ ತಮ್ಮ ಕಥಾ ಕೀರ್ತನೆಯಲ್ಲಿ ತಂಗಿ ಎಂದೇ ಪ್ರಸ್ತುತ ಪಡಿಸಿದ್ದೇನೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ನಾನು ಅವರಿಗೆ ಬಸವಣ್ಣನವರಿಗೆ ಒಬ್ಬ ಅಕ್ಕ ಅಕ್ಕ ನಾಗಮ್ಮ ಮತ್ತು ಒಬ್ಬ ಅಣ್ಣ ದೇವರಾಜ ಇದ್ದನು ಎಂದು ಹೇಳಿದೆ.
ಆಗ ಅವರು ಮಾದರಸನಿಗೆ ಮೊದಲನೆಯ ಹೆಂಡತಿ ಇದ್ದಳು ಅವಳ ಮಗ ದೇವರಾಜ ಮತ್ತು ಎರಡನೆಯ
ಹೆಂಡತಿ ಮಾದಲಾಂಬಿಕೆಗೆ ಬಾಗೇವಾಡಿಯ ನಂದಿ ವರಪ್ರಸಾದದಿಂದ ಬಸವಣ್ಣ ಹುಟ್ಟಿದನು ನಂತರ ತಂಗಿ ನಾಗಮ್ಮ ಹುಟ್ಟಿದಳು ಎಂದು ಚಿದಾನಂದ ಮೂರ್ತಿ ಅವರು ದಾಖಲಿಸಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ನಾನು ಮಾದರಸರ ಮೊದಲ ಹೆಂಡತಿ ಯಾರು ಎಂದು ಕೇಳಿದೆ. ಆಗ ಅವರು ಚಿದಾನಂದ ಮೂರ್ತಿ ಅವರು ಮೊದಲನೆಯ ಹೆಂಡತಿ ಹೆಸರು ದಾಖಲಾಗಿಲ್ಲ ಎಂದು ಹೇಳಿದರು.

ಹರಿಹರನು ನಾಗಮ್ಮ ಬಸವಣ್ಣನವರ ತಂಗಿ ಎಂದು ಹೇಳಿದ್ದಾನೆ. ಬಸವಣ್ಣನವರ ನಂತರದ ನೂರು ವರುಷದ ಆಸುಪಾಸು ಹರಿಹರ ಹುಟ್ಟಿದ್ದಾನೆ. ಹೀಗಾಗಿ ಡಾ. ಎಂ ಚಿದಾನಂದ ಮೂರ್ತಿ ಡಾ ಎಂ ಎಂ ಕಲಬುರ್ಗಿ ಡಾ ವೀರಣ್ಣ ರಾಜೂರ ಮುಂತಾದ ಸಂಶೋಧಕರು ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ಕರೆಯುತ್ತಾರೆ.

ವಾಸ್ತವಿಕವಾಗಿ ಇದನ್ನು ಚರ್ಚಿಸೋಣ….
೧ ಬಸವಣ್ಣನವರು ತಮ್ಮ ಮನೆ ಬಿಟ್ಟಾಗ ಕೇವಲ ಎಂಟು ವರುಷ ಬಸವಣ್ಣನವರಿಗಿಂತ ಚಿಕ್ಕವಳಾದ ನಾಗಮ್ಮ ಕೂಡಲ ಸಂಗಮದವರೆಗೆ ಹೇಗೆ ಹೋದರು ಇದು ಸಾಧ್ಯವಿರದ ಮಾತು.

೨ ಅಕ್ಕನಾಗಮ್ಮ ಮತ್ತು ಶಿವಸ್ವಾಮಿ ( ನಾಗಮ್ಮನ ಪತಿ)
ಇವರು ಬಸವಣ್ಣನವರಿಗೆ ಆಸರೆಯಾಗಿ ಕೂಡಲ ಸಂಗಮಕ್ಕೆ ಹೋದರು.

೩ ಇಲ್ಲದ ಜಾತಿವೇದ ಮುನಿ ಜಾತವೇದ ಮುನಿಯೆಂಬ ಎಂಬ ಕೃತಕ ಗುರುವನ್ನು ಡಾ ಚಿದಾನಂದ ಮೂರ್ತಿ ಅವರು ಜಾತಿವೇದ ಮುನಿ ಎಂಬ ಗುರು ಬಸವಣ್ಣನವರಿಗೆ ಇದ್ದರು ಎಂಬುದನ್ನು ದಾಖಲಿಸುತ್ತಾರೆ. ಆದರೆ ಡಾ ಎಂ ಎಂ ಕಲಬುರ್ಗಿ ಅವರು ಜಾತವೇದ ಮುನಿಯನ್ನು ಅಲ್ಲಗಳೆಯುತ್ತಾರೆ.

೪ ಡಾ ವೀರಣ್ಣ ರಾಜೂರ ಅವರು ಕಳೆದ ೪೫ ವರ್ಷಗಳಿಂದ ಶರಣರ ವಚನಗಳನ್ನು ಸಂಪಾದನೆ ಮಾಡಿದ್ದಾರೆ ಎಂದು ಇತ್ತೀಚೆಗೆ ಅವರೇ ಹೇಳಿಕೊಂಡಿದ್ದಾರೆ.

೫ ಡಾ ಎಂ ಎಂ ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ ಜನಪ್ರಿಯ ವಚನ ಸಂಪುಟಗಳಲ್ಲಿ ಐದು ವಚನ ಸಂಪುಟಗಳನ್ನು ಡಾ ವೀರಣ್ಣ ರಾಜೂರ ಮಾಡಿದ್ದಾರೆ.

೬ ಡಾ ಎಂ ಎಂ ಕಲಬುರ್ಗಿ ಅವರು ಬಸವಣ್ಣನವರ ವಚನ ಸಂಪುಟ ಸಂಪಾದಿಸಿದರಲ್ಲದೆ ಉಳಿದ ೧೫ ಸಂಪುಟಗಳನ್ನು ತಿದ್ದಿ ತೀಡಿ ಸಂಪಾದಿಸಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

೭ ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯ ನಂತರ ಅವರ ಉತ್ತರಾಧಿಕಾರಿಯಾಗಿ ಡಾ ವೀರಣ್ಣ ರಾಜೂರ ಸರ್ ಪ್ರಧಾನ ಸಂಪಾದಕತ್ವದ ಜೊತೆಗೆ ಬಸವಣ್ಣನವರ ವಚನ ಸಂಪುಟ ಮತ್ತು ಶಿವಶರಣೆಯರ ಸಂಪುಟವನ್ನು ಸಂಪಾದಿಸಿದ್ದಾರೆ.

೮ ಬಸವಣ್ಣನವರ ವಚನ ಸಂಪುಟದಲ್ಲಿ ಪ್ರಸ್ತಾವನೆಯಲ್ಲಿ ಡಾ ಎಂ ಎಂ ಕಲಬುರ್ಗಿ ಅವರು ಬರೆದ ಪ್ರಸ್ತಾವನೆಯನ್ನು ಯಥಾವತ್ತಾಗಿ ಬಳಸಿ ಅಕ್ಕನಾಗಮ್ಮ ಬಸವಣ್ಣನವರ ತಂಗಿ ಎಂದು ದಾಖಲಿಸಿದ್ದಾರೆ.

೯ ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದ ಅಣ್ಣ ಜತ್ತಿ ಅವರು ಇಂತಹ ಗೊಂದಲಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜನರ ಮತ್ತು ವಿದ್ವಾಂಸ ಸಂಶೋಧಕರ ನಡುವಿನ ಕಂದಕಗಳನ್ನು ಮುಚ್ಚುವ ಯಾವುದೇ ಪ್ರಯತ್ನ ಮಾಡುವುದಿಲ್ಲ.
ಉದಾಹರಣೆ ಎಂದರೆ ಇತ್ತೀಚೆಗೆ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದೆನ್ನುತ್ತಾ ದೇವರ ದಾಸಿಮಯ್ಯನವರ ಮರು ಚಿಂತನೆಗೆ ಓದುಗರು ಬಸವ ಭಕ್ತರು ಪ್ರತಿಭಟಿಸಿ ಪತ್ರ ಚಳವಳಿ ನಡೆಸಿದರು.
ಡಾ ಅರವಿಂದ ಅಣ್ಣ ಜತ್ತಿ ಅವರಿಗೆ ನಾನೇ ಫೋನ್ ಮಾಡಿದ್ದೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದು ಅತ್ಯಂತ ನೋವಿನ ಸಂಗತಿ.

ಒಬ್ಬ ವಚನ ಸಾಹಿತ್ಯ ಓದುಗರಿಗೆ ಸಂಶೋಧಕರ ಇಂತಹ ಅಭಿಮತಗಳಿಂದ ಗೊಂದಲ ಉಂಟಾಗುತ್ತದೆ.

ನಾನು ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ ಎಂದು ಹೇಳುತ್ತಾ ಜನಪದಿಗರ ಮೌಖಿಕ ಪದ್ಯಗಳನ್ನು ಹೇಳಿಕೆಗಳನ್ನು ಭಜನೆ ಪದ ಮುಂತಾದ ಆಕರಗಳಿಂದ ಮತ್ತು ಶತಮಾನಗಳಿಂದ ಇಂತಹ ಪುರಾಣ ಕಥೆಗಳಿಂದ ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ಎಂದು ಸಿದ್ದವಾದರೂ ಸಹಿತ ಇವತ್ತಿನ ೫ ನೆಯ ವಚನ ಸಂಪುಟದ ಬಸವಣ್ಣನವರ ವಚನ ಸಂಪುಟದಲ್ಲಿ ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ದಾಖಲಿಸಿದ್ದಾರೆ.

ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ ಎನ್ನುವುದಕ್ಕೆ ಅಕ್ಕ ನಾಗಮ್ಮನವರ ಒಂದು ವಚನವೇ ಸಾಕ್ಷಿಯಿದೆ.

ಬಸವನೆ ಮಖಸೆಜ್ಜೆ, ಬಸವನೆ ಅಮಳೋಕ್ಯ.
ಬಸವನ ನಾನೆತ್ತಿ ಮುದ್ದಾಡಿಸುವೆನು.
ಬಸವಾ, ಸಂಗನಬಸವಿದೇವಾ ಜಯತು.
ಬಸವಾ, ಸಂಗನಬಸವಲಿಂಗಾ ಜಯತು.
ಬಸವಗೂ ಎನಗೂ ಭಾವಭೇದವಿಲ್ಲದ
ಬಸವಗೂ ಎನಗೂ ರಾಸಿಕೂಟವುಂಟು.
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ
ಬಸವನ ಬೆಸರಾದ ಬಾಣತಿ ನಾನಯ್ಯಾ
ಬಸವಾ,ಬಸವಾ,ಬಸವಾ/

ಬಸವಣ್ಣನವರ ಬಗ್ಗೆ ಬರೆಯುತ್ತಾ ಅಕ್ಕ ನಾಗಮ್ಮ ತನ್ನ ತಾಯಿ ಮಾದಲಾಂಬಿಕೆ ಬಸುರಾದಾಗ ಬಸವಣ್ಣನವರ ಹುಟ್ಟಿದ ನಂತರ ಅವನನ್ನು ಎತ್ತಿ ಮುದ್ದಾಡಿರುವೆನು. ತನ್ನ ತಾಯಿಯ ಬಾಣಂತಿಯ ಕಾರ್ಯವನ್ನು ಮಾಡಿದ್ದೇನೆ ಎಂದು ಹೇಳಿಕೊಂಡಾಗ, ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಹೇಗಾಗುತ್ತಾಳೆ.?

ಇವತ್ತು ವಚನ ಸಾಹಿತ್ಯ ಚಳವಳಿಯನ್ನು ಕುಗ್ಗಿಸುವ ಕೆಲ ಶಕ್ತಿಗಳು ವೈದಿಕ ವ್ಯವಸ್ಥೆಯೊಳಗೆ ಲಿಂಗಾಯತ ಧರ್ಮವನ್ನು ಸೇರಿಸ ಬೇಕೆಂಬ ಹುನ್ನಾರ ಇನ್ನು ಕೆಲ ಸ್ವಯಂ ಘೋಷಿತ ಸಂಶೋಧಕರು ವಚನ ಚಳವಳಿ ಬಸವ ಪೂರ್ವ ಯುಗಕ್ಕೆ ಒಯ್ಯುವ ಅವಿವೇಕತನದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನಪ್ರಿಯ ವಚನ ಸಂಪುಟಗಳ ಪ್ರಧಾನ ಸಂಪಾದಕರಲ್ಲಿ ಕಳಕಳಿಯ ವಿನಂತಿ ಇಂತಹ ದೋಷಗಳನ್ನು ಸರಿಪಡಿಸಬೇಕೆಂದು ಪ್ರಾರ್ಥಿಸುತ್ತೇನೆ.

ಡಾ ಶಶಿಕಾಂತ ಪಟ್ಟಣ
ಅಧ್ಯಕ್ಷರು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ
ರಾಮದುರ್ಗ ಪುಣೆ

Latest articles

More like this